

ಮೈಸೂರು: ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡಲಾಗುತ್ತಿದೆ. ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ 1098 ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಹಯೋಗದಲ್ಲಿ ಮಹಾರಾಜ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಪದ್ಧತಿ ನಿರ್ಮೂಲನೆಗಾಗಿ ಸಂವಿಧಾನದಲ್ಲಿ 1986ರಲ್ಲಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೊಳಿಸಿದೆ. ಈ ಪದ್ಧತಿ ವಿರುದ್ಧ ಹೋರಾಡುವ ಹಾಗೂ ಅದನ್ನು ನಿರ್ಮೂಲನೆ ಮಾಡುವ ಕೆಲಸವಾಗಬೇಕು. ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದರು.
ಎಷ್ಟೋ ಮಕ್ಕಳು ಶಾಲೆಗಳಿಗೆ ಹೋಗದೆ ತಮ್ಮ ಸುಂದರವಾದ ಬಾಲ್ಯದ ದಿನಗಳನ್ನು ಈಗಲೂ ಕಳೆದುಕೊಳ್ಳುತ್ತಿದ್ದಾರೆ. ಬಾಲ ಕಾರ್ಮಿಕರನ್ನು ನೇಮಿಸಿಕೊಂಡು ಅಪಾಯಕಾರಿ ಉದ್ದಿಮೆಯಲ್ಲಿ ದುಡಿಸಿಕೊಳ್ಳುತ್ತಿರುವ ಮಾಲೀಕರಿಂದ 20 ಸಾವಿರ ರೂ. ದಂಡ, 6 ತಿಂಗಳಿನಿಂದ 2 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಹೇಳಿದರು. ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಭವಿಷ್ಯ ನಾಶ ಮಾಡುತ್ತದೆ. ಶಿಕ್ಷಣದಿಂದ ವಂಚಿತರಾಗುತ್ತಾರೆ, ದೈಹಿಕವಾಗಿ, ಮಾನಸಿಕವಾಗಿ ಕುಂಠಿತರಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಈ ಮನಃಸ್ಥಿತಿ ಬದಲಾಯಿಸುವ, ಜಾಗೃತಿ ಮೂಡಿಸುವ, ಎಚ್ಚರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸದಸ್ಯ ಕಾರ್ಯದರ್ಶಿ ಎಸ್.ಆರ್‌ವೀಣಾ ಮಾತನಾಡಿ, ಮಕ್ಕಳು ಬಾಲ್ಯದಲ್ಲಿ ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನ ಇರಬೇಕು. ಅದನ್ನು ಬಿಟ್ಟು ಕೆಲಸದ ಕಡೆ ಗಮನ ಬಾರದಂತೆ ಪಾಲಕರು ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಬೇಕು. ಬಾಲ್ಯದಲ್ಲೇ ವಿದ್ಯಾಭ್ಯಾಸವನ್ನು ಚಿವುಟಬಾರದು ಎಂದು ಹೇಳಿದರು.
ಬಾಲ ಕಾರ್ಮಿಕ ಮಕ್ಕಳು ಎಲ್ಲಿಯೇ ಕಂಡು ಬಂದರೂ ಅವರನ್ನು ಶಾಲಾ ಕಾಲೇಜುಗಳಿಗೆ ಸೇರಿಸುವಂತಹ ಒಂದು ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳನ್ನು ದುಡಿಮೆಗೆ ಬಳಸಿಕೊಂಡರೆ ಅದು ಅಪರಾಧ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲ ಎನ್. ಸುಂದರ್ ರಾಜ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಹೆಚ್ಚಳಕ್ಕೆ ಬಡತನ ಹಾಗೂ ಅನಕ್ಷರತೆಯೇ ಕಾರಣ. ಬಾಲ ಕಾರ್ಮಿಕರನ್ನು ವಿಮುಕ್ತರನ್ನಾಗಿ ಮಾಡಲು ಕೈಲಾಶ್ ಸತ್ಯಾರ್ಥಿ ಅವರು ದೇಶಾದ್ಯಂತ ಬಚ್ಪನ್ ಬಚಾವ್ ಎಂಬ ಆಂದೋಲನ ಕೈಗೊಂಡಿದ್ದರು. ಇದರ ಅಂಗವಾಗಿ ದೇಶಾದ್ಯಂತ 45 ಲಕ್ಷ ಮಕ್ಕಳನ್ನು ಬಾಲ ಕಾರ್ಮಿಕರಿಂದ ಹೊರತಂದರು. ಅವರಿಗೆ 2014 ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು ಎಂದು ತಿಳಿಸಿದರು.
ಸಂವಿಧಾನದ 24ನೇ ವಿಧಿಯ ಅನ್ವಯ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳಬಾರದು ಎಂಬ ಕಾನೂನಿದೆ. 21ಎ ವಿಧಿಯ ಪ್ರಕಾರ ಸರ್ಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡಬೇಕು. 45ನೇ ವಿಧಿಯು 6 ವರ್ಷ ಒಳಗಿನ ಮಕ್ಕಳಿಗೆ ಸರ್ಕಾರ ಕಡ್ಡಾಯವಾಗಿ ಪೌಷ್ಟಿಕ ಆಹಾರ ನೀಡಬೇಕು ಎಂದು ಸಂವಿಧಾನವು ಮಕ್ಕಳ ಹಕ್ಕಿಗಾಗಿ ಎಚ್ಚರಿಸುತ್ತಿದೆ. ಮಕ್ಕಳಿಗೆ ಹಾಗೂ ಪಾಲಕರಿಗೆ ಮಕ್ಕಳ ಕಾನೂನಿನ ಅರಿವುಗಳಿಲ್ಲ ಎಂದರು.
ಪ್ರಸ್ತುತ ಬಾಲ ಅಪರಾಧಿ ಹಾಗೂ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಲ್ಲದೆ, ಭಾರತದಲ್ಲಿ ನಿತ್ಯ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಕಾಣಸಿಗುತ್ತಿವೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಇಂಥ ದೌರ್ಜನ್ಯಗಳು 900 ಪ್ರಕರಣಗಳು ದಾಖಲಾಗಿವೆ. ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸವಾದರೂ ಕೃತ್ಯಗಳು ನಡೆಯುತ್ತಿದ್ದು, ಇದು ಸಮಾಜವೇ ತಲೆ ತಗ್ಗಿಸುವಂತಹ ನೀಚ ಕೃತ್ಯ ಎಂದು ಹೇಳಿದರು.
18 ವರ್ಷ ಒಳಗಿನವರನ್ನು ಮಕ್ಕಳೆಂದು, 14ವರ್ಷ ಒಳಗಿನ ಮಕ್ಕಳನ್ನು ಹರೆಯದ ಮಕ್ಕಳೆಂದು ಪರಿಗಣಿಸಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕಾರ್ಮಿಕ ಕೆಲಸಕ್ಕೆ ಬಳಸಿಕೊಳ್ಳದಂತೆ ಪ್ರತಿಯೊಬ್ಬರೂ ಸಮಾಜವನ್ನು ಎಚ್ಚರಿಸುವ, ತಿಳಿ ಹೇಳುವ ಕೆಲಸ ಮಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಕೆಲಸವಾಗಬೇಕು ಎಂದರು.
ಮೈಸೂರು ಉಪವಿಭಾಗ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಪ್ರಾಂಶುಪಾಲ ಶಂಕರ್, ಉಪ ಪ್ರಾಂಶುಪಾಲ ಮಹೇಶ್, ಇಎಸ್‌ಐ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಲಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರವಿಚಂದ್ರ, ಡಾನ್ ಬಾಸ್ಕೋ ಮಕ್ಕಳಾಲಯದ ಜಿಮ್ ಜೋಸ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾಧಿಕಾರಿ ಎಚ್.ಪಿ. ಮಲ್ಲಿಕಾರ್ಜುನ, ಮಡಿಲು ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಶ್ರೀನಿವಾಸ್ ಇದ್ದರು.