

ಹಾಸನ: ಬಾಲ ಕಾರ್ಮಿಕ ಪದ್ಧತಿ ಶಿಕ್ಷಾರ್ಹ ಅಪರಾಧವಾಗಿದ್ದು, ನಮ ಸುತ್ತಮುತ್ತಲು ಯಾರಾದರೂ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದರೆ ಅಂತವರನ್ನು ರಕ್ಷಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕ ರಾಜ್ಯ ವಿಮಾ ಯೋಜನೆ, ವೈದ್ಯಕೀಯ ಸೇವೆ, ಕಾರ್ಮಿಕ ಭವಿಷ್ಯನಿಧಿ ಹಾಗು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮಿಕೊಂಡಿದ್ದ ಜಿಲ್ಲೆಯ ಕಾರ್ಮಿಕ ಕಾಯ್ದೆಗಳ ಅನುಷ್ಟಾನ ಹಾಗು ವಿವಿಧ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಇಂದಿಗೂ ಜೀವಂತವಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಕರಣ ಬೆಳಕಿಗೆ ತಂದು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿದರೂ ವ್ಯವಸ್ಥೆ ಬದಲಾಗುತ್ತಿಲ್ಲ. ಯಾವ ಉದ್ದೇಶಕ್ಕಾಗಿ ಬಾಲ ಕಾರ್ಮಿಕರನ್ನು ದುಡಿಮೆಗೆ ಬಳಸಿಕೊಳ್ಳುತ್ತಾರೆಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾಭ್ಯಾಸ, ಕ್ರೀಡೆ ಎಂದು ಆರಾಮಾಗಿ ಇರಬೇಕಾದ ಮಕ್ಕಳಲ್ಲಿ ದುಡಿಯುವ ದೈಹಿಕ ಸಾಮರ್ಥ್ಯ ಇರುವುದಿಲ್ಲ. ಕಡಿಮೆ ಸಂಬಳ ಕೊಟ್ಟರೆ ಸಿಗುತ್ತಾರೆಂಬ ಕಾರಣಕ್ಕೆ ಮಾಲೀಕರು ಮಕ್ಕಳನ್ನೇ ಬಯಸುತ್ತಾರೆ. ಆದರೆ ಈ ರೀತಿಯ ಪ್ರಮಾದಕ್ಕೆ ಯಾರೂ ಮುಂದಾಗಬಾರದೆಂದರು.
ಕಾರ್ಯಕ್ರಮದಲ್ಲಿ ಉಪಕಾರ್ಮಿಕ ಆಯುಕ್ತ ಎಚ್.ಎಲ್.ಗುರುಪ್ರಸಾದ್, ಕಾರ್ಮಿಕ ಅಧಿಕಾರಿ ಯಮುನಾ, ಜನಾರ್ಧನ್, ಇಎಸ್‌ಐ ವಿಭಾಗ ಅಧಿಕಾರಿ ಮುರುಗೇಶ್, ರಾಘವೇಂದ್ರ, ರಘು ಇತರರಿದ್ದರು.