ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಹಕಾರ ಅಗತ್ಯ

bkt-12-1
Published on

ಬಾಗಲಕೋಟೆ: ಬಾಲ ಕಾರ್ಮಿಕ ಪದ್ದತಿ ಪಿಡುಗಾಗಿ ಪರಿಣಮಿಸಿದ್ದು, ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಾಲ ಕಾರ್ಮಿಕರು ಇನ್ನು ಅಲ್ಲಲ್ಲಿ ಕಂಡುಬರುತ್ತಿದ್ದಾರೆ. ನಿರ್ಮೂಲನೆಗೆ ಸರಕಾರ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ನಿರ್ಮೂಲನೆ ಆಗಿರುವದಿಲ್ಲ. ನಿರ್ಮೂಲನೆಗೆ ವಿವಿಧ ಇಲಾಖೆ ಹಾಗೂ ಸಾರ್ವಜನಿಕರ ಸತತ ಪ್ರಯತ್ನ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಿ ಮಾತನಾಡಿದ ಅವರು ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯವಾಗಿದೆ. ಶಿಕ್ಷಣ ಕೊಡುವ ವೇಳೆಯಲ್ಲಿ ಕೆಲಸದಲ್ಲಿ ತೊಡಗಿಸುವದರಿಂದ ಬಾಲ್ಯದ ಜೀವನ ಉತ್ತಮವಾಗಿರಲು ಸಾಧ್ಯವಾಗುವದಿಲ್ಲ. ಬಾಲಕಾರ್ಮಿಕ ಪದ್ದತಿ ನಿರ್ಮೂಲಣೆ ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸುವಲ್ಲಿ ಕಾರ್ಮಿಕ ಇಲಾಖೆಯ ಜೊತೆ ಇತರೆ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮುಖ್ಯವಾಗಿದ್ದು, ಉತ್ತಮ ಬಾಲ್ಯ ರೂಪಿಸುವದರ ಜೊತೆಗೆ ಅನಿಷ್ಟ ಪದ್ದತಿಯಿಂದ ಮುಕ್ತಗೊಳಿಸಬೇಕು. ಶಿಕ್ಷೆಗಿಂತ ಸುಧಾರಣೆ ಮುಖ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹೇಶ ಪಾಟೀಲ ಮಾತನಾಡಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಕೆಲಸವಾಗಬಾರದು. ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಬಾಲಕಾರ್ಮಿಕ ಪದ್ದತಿ ವಿರೋಧಿ ಕಾಯ್ದೆ ಜಾರಿಗೆ ತಂದಿದೆ. ಮಕ್ಕಳ ಬಾಲ್ಯವನ್ನು ರಕ್ಷಿಸಿ ಬೆಳೆಸಲು ಬದ್ದರಾಗಬೇಕಿದೆ ಎಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿ ಬಾಲ ಕಾರ್ಮಿಕ ನಿರ್ಮೂಲನೆ ಎಲ್ಲ ಸಹಕಾರ ಅಗತ್ಯವಾಗಿದ್ದು, ಮಕ್ಕಳನ್ನು ಕೆಲಸ ಮಾಡುವುದು ಕಂಡುಬಂದಲ್ಲಿ 1098ಗೆ ಕರೆ ಮೂಲಕ ಮಾಹಿತಿ ನೀಡಲು ತಿಳಿಸಿದರು.

ವಕೀಲರು ಹಾಗೂ ಉಪ ಕಾನೂನು ನೆರವು ಅಭೀರಕ್ಷಕ ಪ್ರಶಾಂತ ನಾರಾಯಣಕರ ಬಾಲ ಮತ್ತು ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016 ಕುರಿತು ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net