

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಬಾರ‌್ಲಹಳ್ಳಿಯಲ್ಲಿ ಮರ ಕಡಿಸಿ, ಮೀಸಲು ಅರಣ್ಯ ಜಾಗದಲ್ಲಿ ವಿದ್ಯುತ್ ಕಂಬಗಳನ್ನು ಹಾಕಿಸಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲಾನ್ ತಿಳಿಸಿದ್ದಾರೆ.
ಜಮೀನಿಗೆ ಅಡ್ಡಿ, ನೆರಳು ಬೀಳುವಿಕೆ, ಕೋತಿಗಳ ಹಾವಳಿ ಸೇರಿ ನಾನಾ ನೆಪದ ಹಿನ್ನೆಲೆಯಲ್ಲಿ 14 ಬೃಹತ್ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೆ ನಿವೃತ್ತ ಡಿವೈಎಸ್‌ಪಿ ಕುಟುಂಬದವರು ಕಡಿದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಖಾಸಗಿ ಜಮೀನಿನಲ್ಲಿ ಮರಗಳನ್ನು ಕಡಿಯುವುದಕ್ಕೆ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಮೀಸಲು ಅರಣ್ಯ ಒತ್ತುವರಿ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಸಲಾನ್ ತಿಳಿಸಿದ್ದಾರೆ.
ಪುರಾತನ ಜಾಲಾರಿ ನರಸಿಂಹಸ್ವಾಮಿ ದೇವಾಲಯ ಸಮೀಪದ ಖಾಸಗಿ ಜಮೀನುಗಳ ಮಾರಾಟ ಪ್ರಕ್ರಿಯೆ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ, ಯಾರೂ ಸಹ ರಸ್ತೆಯ ಬದಿಯಲ್ಲಿದ್ದ ಮರಗಳನ್ನು ಕಡಿದಿರಲಿಲ್ಲ. ಆದರೆ, ಇಲ್ಲಿ ಭೂಮಿ ಖರೀದಿಸಿದ ಚಂದ್ರಶೇಖರ್ ಕುಟುಂಬ ಈ ಕೆಲಸ ಮಾಡಿದೆ. ಪ್ರಶ್ನಿಸಿದರೆ ನಮ್ಮ ಜಮೀನು, ನಮ್ಮಿಷ್ಟ ಎನ್ನುತ್ತಿದ್ದಾರೆ, ಇದಕ್ಕೆಲ್ಲ ನಿವೃತ್ತ ಡಿವೈಎಸ್‌ಪಿ ಚಂದ್ರಶೇಖರ್ ಪತ್ನಿ, ಜಮೀನಿನ ಮಾಲೀಕಿ ರೇಣುಕಾ ಕಾರಣ ಎಂಬುದು ಗ್ರಾಮಸ್ಥರ ಆರೋಪ.
ನಮ್ಮ ಜಮೀನಿನಲ್ಲಿ ಅಡ್ಡಲಾಗಿ ಬೆಳೆದಿರುವ ಮರಗಳನ್ನು ತೆಗೆಸಲಾಗಿದೆ. ನಾವು ಬೇರೆಯವರ ಇಲ್ಲವೇ ಸರ್ಕಾರಿ ಜಾಗದಲ್ಲಿ ಮಾಡಿಲ್ಲ. ಪ್ರಕರಣ ದಾಖಲಿಸಿದರೆ ಕಾನೂನು ಪ್ರಕಾರ ಎದುರಿಸುತ್ತೇವೆ. ರೇಣುಕಾ, ಜಮೀನು ಮಾಲಕಿ ಜಮೀನಿನ ಮೇಲೆ ನೆರಳು ಬೀಳುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಮರಗಳನ್ನು ಕಡಿಸಿರುವುದು ಖಂಡನೀಯ. ರಘುನಂದನ್, ಬಾರ‌್ಲಹಳ್ಳಿ ನಿವಾಸಿ,