

ಹುಬ್ಬಳ್ಳಿ: ಬಾರ್ ದಾಖಲೆಗಳ ಪರಿಶೀಲನೆಗೆ ಬಂದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಾರ್ ಮಾಲೀಕನನ್ನು ರಸ್ತೆಯಲ್ಲಿ ದರ ದರ ಎಳೆದಾಡಿ, ಕೊರಳಪಟ್ಟಿ ಹಿಡಿದು ಅಮಾನವೀಯವಾಗಿ ಥಳಿಸಿರುವ ಘಟನೆ ಇಲ್ಲಿನ ಕಾರವಾರ ರಸ್ತೆ ಶಿವಶಂಕರ ಕಾಲನಿಯ ಶೀತಲ್ ಬಾರ್ ಬಳಿ ಗುರುವಾರ ನಡೆದಿದೆ.
ಚಾಟ್ನಿ ಕಾಂಪ್ಲೆಕ್ಸ್ ಎದುರಿನ ಪ್ರಿನ್ಸ್ ಗೇಟ್ ವೈನ್ಸ್ ಮಾಲೀಕ ಶ್ರೀನಿವಾಸ ಜಿತೂರಿ ಹಲ್ಲೆಗೀಡಾದ ವ್ಯಕ್ತಿ. ಅಬಕಾರಿ ಅಧಿಕಾರಿಗಳ ತಂಡ ಮಧ್ಯಾಹ್ನ ಪ್ರಿನ್ಸ್ ಗೇಟ್ ವೈನ್ಸ್ ಮೇಲೆ ದಾಳಿ ನಡೆಸಿತ್ತು. ಆ ವೇಳೆ ನೀರಿನ ಬಾಟಲಿಗಳಲ್ಲಿ ಲಿಕ್ಕರ್ ತುಂಬಿ ಇಡಲಾಗಿದೆ ಎಂದು ಆರೋಪಿಸಿ ಕೆಲ ಬಾಟಲಿಗಳನ್ನು ಬಾಕ್ಸ್ನಲ್ಲಿ ತುಂಬಿಕೊಂಡು ಶೀತಲ್ ಬಾರ್ಗೆ ತೆರಳಿದ್ದರು. ಬಳಿಕ ಪ್ರಿನ್ಸ್ ಗೇಟ್ ಮಾಲೀಕ ಶೀತಲ್ ಬಾರ್ ಬಳಿ ಬಂದು, ಬಾಟಲಿ ಏಕೆ ತೆಗೆದುಕೊಂಡು ಬಂದಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ನೀರಿನ ಬಾಟಲಿಯಲ್ಲಿ ಮದ್ಯ ಇತ್ತು ಎಂದು ಅಧಿಕಾರಿಗಳು ಉತ್ತರಿಸಿದ್ದರು.
ಈ ವಿಷಯವಾಗಿ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ಕಾರಣವಾಗಿತ್ತು. ಬಳಿಕ ಆಕ್ರೋಶಗೊಂಡ ಅಬಕಾರಿ ಸಿಬ್ಬಂದಿ ಶ್ರೀನಿವಾಸ ಜಿತೂರಿ ಅವರನ್ನು ಅಮಾನವೀಯವಾಗಿ ಎಳೆದುಕೊಂಡು ಹೋಗಲು ಯತ್ನಿಸಿದರು. ಜಿತೂರಿ, ಅಧಿಕಾರಿಯ ಕಾಲು ಹಿಡಿದು ಬೇಡಿಕೊಂಡರೂ ಬಿಡದ ಸಿಬ್ಬಂದಿ ರಸ್ತೆಯಲ್ಲೇ ಎಳೆದಾಡಿ ದರ್ಪ ತೋರಿಸಿದ್ದರು. ಅಬಕಾರಿ ಸಿಬ್ಬಂದಿ ಜಿತೂರಿ ಅವರ ಮೇಲೆ ಹಲ್ಲೆ ನಡೆಸಿದ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಇದೀಗ ವೈರಲ್ ಆಗಿದೆ. ಅಬಕಾರಿ ಅಧಿಕಾರಿಗಳ ದರ್ಪಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಬಾರ್ ಮಾಲೀಕರ ತಪ್ಪಿದ್ದರೆ ಕಾನೂನು ಕ್ರಮ ಜರುಗಿಸಬೇಕು ಅದನ್ನು ಬಿಟ್ಟು ಈ ರೀತಿ ವರ್ತಿಸುವುದು ಎಷ್ಟು ಸರಿ ಎಂದು ಛೀಮಾರಿ ಹಾಕಿದ್ದಾರೆ.
2 ಲಕ್ಷ ರೂ. ಲಂಚ ಕೇಳಿದ ಆರೋಪ: ಬೆಳಗಾವಿಯ ಅಬಕಾರಿ ಅಧಿಕಾರಿ ಮಲ್ಲಿಕಾರ್ಜುನ ಸೇರಿ ಮೂವರ ತಂಡ ಬಾರ್ಗೆ ಆಗಮಿಸಿತ್ತು. ಎಲ್ಲ ದಾಖಲೆಗಳು ಸರಿ ಇದ್ದರೂ 2 ಲಕ್ಷ ರೂ. ಲಂಚ ಕೇಳಿದ್ದರು. ಲಂಚ ಕೊಡದಿದ್ದರೆ ಅಂಗಡಿ ಮುಚ್ಚಿಸಿ, ಕೇಸ್ ಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಶ್ರೀನಿವಾಸ ಜಿತೂರಿ ಆರೋಪಿಸಿದ್ದಾರೆ.
ಬೆಳಗಾವಿಯ ಅಬಕಾರಿ ಸ್ಕಾ್ವಡ್ ತಂಡ ತಪಾಸಣೆಗೆಂದು ಬಂದಿತ್ತು. ಆ ವೇಳೆ ಬಾರ್ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. | ಮಂಜುನಾಥ ಅರೆಗುಳಿ ಅಬಕಾರಿ ಅಧಿಕಾರಿ