ಬಾರ್ ಆ್ಯಂಡ್ ರೆಸ್ಟೋರೆಂಟ್ ಬಂದ್‌ಗೆ ಒತ್ತಾಯಿಸಿ ಪ್ರತಿಭಟನೆ

ctd --0004
Published on

ಚಿತ್ರದುರ್ಗ: ನಗರದ ಉಮಾಪತಿ ಸಮುದಾಯ ಭವನದ ಸಂಕೀರ್ಣದಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಬಂದ್ ಮಾಡಬೇಕು ಅಥವಾ ಬೇರೆಡೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಸಂಘರ್ಷ ಸಮಿತಿ ಕಾರ‌್ಯಕರ್ತರು ಡಿಸಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಮುಂದಾಳತ್ವದಲ್ಲಿ ಈ ಹಿಂದೆ ರಾಜ್ಯಾದ್ಯಂತ ಹೆಂಡ ಬೇಡ ಸಾರಾಯಿ ಬೇಡ ಹೋಬಳಿಗೊಂದು ವಸತಿ ಶಾಲೆ ಕೊಡಿ ಎಂಬ ಘೋಷವಾಕ್ಯದೊಂದಿಗೆ ಹೋರಾಟ ನಡೆದಿತ್ತು. ಇದರ ಪ್ರತಿಫಲವಾಗಿ ಹೆಂಡ- ಸಾರಾ ಯಿ ಮಾರಾಟ ಸ್ಥಗಿತಗೊಂಡಿದ್ದು, ವಸತಿ ಶಾಲೆಗಳ ಸ್ಥಾಪನೆಗೆ ಸರ್ಕಾರ ಒತ್ತು ನೀಡಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತದ ಗಮನ ಸೆಳೆ ದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಅವರು ಮಾತನಾಡಿ, ನಗರದ ಜೆಜೆ ಹಟ್ಟಿಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಹಲವರ ಮದ್ಯವ್ಯಸನ ಅವರ ಕುಟುಂಬ ವರ್ಗದವರನ್ನು ಆತಂಕಕ್ಕೆ ತಳ್ಳಿದೆ.ನಿತ್ಯವೂ ಮನೆ ಮಂದಿ ಮೇಲೆ ಹಲ್ಲೆ ನಡೆಸುವುದು ಪರಿಪಾಠವಾಗಿದೆ. ಆದ್ದರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಂದ್ ಮಾಡಬೇಕು ಅಥವಾ ಸ್ಥಳಾಂತರಿಸಬೇಕೆಂದು ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆಯನ್ನು ಒತ್ತಾಯಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯ ದರ್ಶಿ ಸಿ.ಚಿಕ್ಕಣ್ಣ, ಹೊಳೆಯಪ್ಪ, ಡಿ.ದುರುಗೇಶಪ್ಪ, ಅವಿನಾಶ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net