

ದೋರನಹಳ್ಳಿ: ಮುಂಗಾರು ಮಳೆ ಭರವಸೆ ಮೇಲೆ ರೈತರು ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದು ಈಗ ಮಳೆ ಇಲ್ಲದೆ ಒಣಗಲಾರಂಭಿಸಿದೆ. ಇನ್ನೂ ಕೆಲ ಕಡೆಗಳಲ್ಲಿ ಅಲ್ಲೊಂದು ಇಲ್ಲೊಂದು ಮೊಳೆಕೆಯೊಡೆದು ನಿಂತಿವೆ. ಭೂಮಿಯಲ್ಲಿ ಸಮರ್ಪಕ ತೇವಾಂಶ ಇಲ್ಲದೆ ಕಾರಣ ರೈತರು ಮತ್ತೆ ಸಂಕಷ್ಟ ಎದುರಿಸುವ ಭೀತಿ ಕಾಡಲಾರಂಭಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರೈತರು ಮುಂಗಾರು ಮಿರಗಿನ ಮಳೆಗೆ ಬಿತ್ತನೆ ಮಾಡಿದ್ದಾರೆ. ಕೆಲವರು ಮಿರಗು ಮಿಂಚುವ ಮುನ್ನವೂ ಬಿತ್ತನೆ ಮಾಡಿದ್ದಾರೆ. ಮುಂಗಾರಿನ ಎರಡು ತಿಂಗಳು ಮುಗಿಯುತ್ತ ಬಂದರೂ ದೋರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಶೇ. ೭೦ ಬಿತ್ತನೆ ಮಾಡಲಾಗಿದೆ. ಆದರೆ ಎರಡು ವಾರದಿಂದ ಮಳೆ ಇಲ್ಲದ ಕಾರಣ ಬಿತ್ತನೆ ಮಾಡಿದ ಬೀಜ ಭೂಮಿಯಿಂದ ಮೇಲೇಳದಂತಾಗಿದೆ.
ಹೋಬಳಿ ಕ್ಷೇತ್ರದಾದ್ಯಂತ ಒಟ್ಟು ೨೩೫೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ ೧೫೮೫೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಈ ಪೈಕಿ ಹತ್ತಿ ೧೩೫೦೦, ತೊಗರಿ ೨೫೦೦ ಮತ್ತು ಹೆಸರು ೨೫೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲದ ಕಾರಣ ಭತ್ತ ಇನ್ನು ನಾಟಿ ಮಾಡಲು ರೈತರು ಹಿಂದೇಟು ಹಾಕುವಂತಾಗಿದೆ.
ಭೂಮಿಗೆ ಬೀಜ ಬಿದ್ದ ಮೇಲೆ ಅದಕ್ಕೆ ನಿರ್ದಿಷ್ಟವಾದ ತೇವಾಂಶದ ಅಗತ್ಯವಿದೆ. ಹೀಗಾಗಿ ಆರಂಭದಲ್ಲಿ ಬಂದ ಮಳೆ ಬಿತ್ತನೆಯಾದ ಮೇಲೆ ವಾರ ಮತ್ತು ಹದಿನೈದು ದಿನ ಕಳೆದರೂ ಮಳೆ ಬಾರದ ಕಾರಣ ಬಿತ್ತನೆ ಮಾಡಿದ ಬೀಜ ಭೂಮಿ ಪಾಲಾಗಿದೆ. ಇನ್ನೂ ಕೆಲವೊಂದು ಭೂಮಿಯಲ್ಲಿ ಅಲ್ಲೊಂದು ಇಲ್ಲೊಂದು ಮೊಳಕೆಯೊಡೆದು ನಿಂತಿವೆ. ಮಳೆಯಾಗದ ಕಾರಣ ತೇವಾಂಶದ ಕೊರತೆಯಿಂದ ಬೆಳೆ ಬಾಡಿ ನಿಂತಿರುವುದನ್ನು ರೈತರಿಗೆ ನೋಡಲು ಆಗುತ್ತಿಲ್ಲ. ದುಬಾರಿ ಬೀಜ ತಂದು ಬಿತ್ತನೆ ಮಾಡಿದ ರೈತರಿಗೆ ಮತ್ತೆ ವರಣ ಕೈ ಕೊಡುತ್ತಾನೆ ಎಂಬ ಚಿಂತೆ ಕಾಡಲಾರಂಭಿಸಿದೆ.