

ಬೆಳಗಾವಿ: ಎಲ್ಲರೂ ಬಾಯಿ ಮುಚ್ಚಿಕೊಂಡು ಪಕ್ಷ ಕಟ್ಟಲು ಗಮನ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಹೇಳಿದ್ದಾರೆ. ವೈಯಕ್ತಿಕವಾಗಿ ನನಗೇ ಬಾಯಿ ಮುಚ್ಚು ಎಂದು ಹೇಳಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಟ್ಟಲು ಗಮನ ಕೊಡಿ ಎಂಬ ಕಾರಣಕ್ಕೆ ಅಧ್ಯಕ್ಷ ಶಿವಕುಮಾರ ಆ ರೀತಿ ಹೇಳಿರಬಹುದು. ನನ್ನ ಹೆಸರನ್ನು ಅವರ ಬಳಸಿಲ್ಲ. ಒಂದು ವೇಳೆ ವೈಯಕ್ತಿಕವಾಗಿ ನನಗೆ ಹೇಳಿದ್ದರೂ ಅವರು ದೊಡ್ಡವರು. ಅವರದ್ದೇ ದೊಡ್ಡದಾಗಲಿ ಬಿಡಿ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂಬುದು ರಾಜ್ಯದ ಅಲ್ಪಸಂಖ್ಯಾತರ ಅಭಿಪ್ರಾಯವಾಗಿದೆ. ಅವರ ಆಡಳಿತಾವಧಿಯ ಜನಪ್ರಿಯ ಯೋಜನೆ ಗಳು, ಅಭಿವೃದ್ಧಿ ಕೆಲಸಗಳನ್ನು ಜನರು ನೆನಪಿಸಿಕೊಳ್ಳು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಹೇಳಿದ್ದೇನೆ. ಮುಖ್ಯ ಮಂತ್ರಿ ಯಾರು ಆಗಬೇಕು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಸಿದ್ದರಾಮೋತ್ಸವದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಚಾರ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಅಲ್ಪಸಂಖ್ಯಾತರು ಸಿದ್ದರಾಮಯ್ಯನವರ ಬಗ್ಗೆ ಒಲವು ಹೊಂದಿದ್ದಾರೆ. ತಮ್ಮ ಸಮುದಾಯದ ವ್ಯಕ್ತಿಯೇ ಮುಖ್ಯಮಂತ್ರಿ ಆಗಬೇಕು ಎಂದು ಎಲ್ಲರಿಗೂ ಆಸಕ್ತಿ ಇರುತ್ತದೆ. ಅದೇ ರೀತಿ ಮುಸ್ಲಿಮರಿಗೂ ಇದೆ. ಒಕ್ಕಲಿಗ ಸಮುದಾಯದವರೇ ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಹೊರಹಾಕಿದ್ದೇ ಡಿ.ಕೆ.ಶಿವಕುಮಾರ ಅವರು. ಹಾಗಾಗಿ ಆ ವಿಷಯದ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದರು.