

ಹೊಳೆನರಸೀಪುರ: ದೇಶಕಂಡ ಅತ್ಯುತ್ತಮ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಡಾ.ಬಾಬು ಜಗಜೀವನರಾಮ್, ಮಹಾತ್ಮಾಗಾಂಧಿ ಅವರ ಪ್ರೇರಣೆಯಿಂದ ಸ್ವಾತಂತ್ರೃ ಹೋರಾಟದಲ್ಲಿ ತೊಡಗಿಸಿಕೊಂಡವರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಅವರ 116ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಬು ಜಗಜೀವನರಾಮ್ ಕೇಂದ್ರ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ಕಾರ್ಮಿಕ ಸಚಿವರಾಗಿದ್ದಾಗ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಹಾಗೂ ಪಿ.ಎಫ್. ಜಾರಿಗೆ ತಂದು ದೇಶದ ಎಲ್ಲ ಕಾರ್ಮಿಕರಿಗೆ ನ್ಯಾಯ ಒದಗಿಸಿದರು. ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾಗ ದೇಶದಲ್ಲಿ ತುಳಿತಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಜನಾಂಗದವರು ವಾಸಿಸುವ ಕೇರಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಜಾರಿಗೆ ತಂದರು. ಆಹಾರ ಖಾತೆ ಸಚಿವರಾಗಿದ್ದಾಗ ದೇಶದ ಜನರ ಆಹಾರ ಭದ್ರತೆಯ ಕಾನೂನು ತಂದು ಭಾರತ ದೇಶದ ಜನರು ಯಾವಾಗಲೂ ಆಹಾರ ಕೊರತೆ ಅನುಭವಿಸದಂತೆ ಮಾಡಿದರು. ಕೃಷಿ ಸಚಿವರಾಗಿದ್ದಾಗ ರೈತರ ಪರವಾದ ಅನೇಕ ಸುಧಾರಣೆಯ ಕಾನೂನುಗಳನ್ನು ತಂದು ದೇಶದ ರೈತರ ಬದುಕನ್ನು ಹಸನಾಗಿಸಿದರು ಎಂದು ಬಣ್ಣಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಾದಿಗ ದಂಡೋರ ಸಮಿತಿ ಮುಖಂಡ ಸಿ.ಆರ್. ಮಂಜುನಾಥ್, ಎಚ್.ಸಿ.ಎನ್.ಚಂದ್ರು, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.