ಬಾಬೂಜಿ ಮೌಲ್ಯಾದರ್ಶ ಪಾಲನೆ ಮಾಡಿ: ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕರೆ

05 cbp 1
Published on

ಚಿಕ್ಕಬಳ್ಳಾಪುರ: ರಾಜಕೀಯ ವ್ಯಾಪಾರೀಕರಣ ಬದಲಿಗೆ ಪ್ರಜಾ ಸೇವೆಯಾಗಬೇಕು. ರಾಜಕಾರಣಿಗಳು ಮೌಲ್ಯಾಧಾರಿತ ಜೀವನ ಅಳವಡಿಸಿಕೊಳ್ಳಬೇಕು. ಇದುವೇ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ ಸಂದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ನಗರ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ 115ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಾಜಿ ಉಪ ಪ್ರಧಾನಮಂತ್ರಿ, ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ ರಾಮ್ ಅವರ ತತ್ವ ಸಿದ್ಧಾಂತಗಳು, ಮೌಲ್ಯಾದರ್ಶಗಳು ಇಂದಿನ ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ ಸೇವೆಕರಾಗಿದ್ದ ಅವರು ಕೇವಲ ದಲಿತ ಸಮುದಾಯಕ್ಕೆ ಅಲ್ಲದೇ ಎಲ್ಲ ಸಮುದಾಯಗಳ ಏಳಿಗೆಗೆ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಧ್ವನಿ ಎತ್ತಿದ ಮಹಾನ್ ನಾಯಕ. ಅವರ ಹೆಸರಿನಲ್ಲಿ ಭವನವನ್ನು 4 ಕೋಟಿ ರೂ.ಗಳ ವೆಚ್ಚದಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲಾಗುವುದು ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ವಿಶ್ವಕ್ಕೆ ಸಮಾನತೆ, ಪ್ರೀತಿ ಹಾಗೂ ತ್ಯಾಗವನ್ನು ಬೋಧಿಸಿದ ಗೌತಮ ಬುದ್ಧ, ಅಶೋಕ ಚಕ್ರವರ್ತಿ ಹಾಗೂ ಡಾ.ಬಾಬು ಜಗಜೀವನರಾಮ್ ಅವರು ಬಿಹಾರ ರಾಜ್ಯದಲ್ಲಿ ಜನಿಸಿರುವುದು ಕಾಕತಾಳಿಯವಾಗಿದೆ ಎಂದು ತಿಳಿಸಿದರು.

ಬಾಬೂಜಿ ಅವರ ಜಯಂತಿಯನ್ನು ಎಂದಿನಂತೆ ಏ.5ರಂದು ಸಾಂಕೇತಿಕವಾಗಿ ಆಚರಿಸಲಾಗಿದೆ. ಏ.14ರಂದು ಅಂಬೇಡ್ಕರ್ ಜಯಂತಿ ದಿನದಂದು ಬಾಬೂಜಿ ಜಯಂತಿಯನ್ನು ಸಹ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಜತೆಗೆ ಇದಕ್ಕೆ ಎಲ್ಲ ವರ್ಗದವರು ಸಹ ಕೈಜೋಡಿಸಿ ಧೀಮಂತ ನಾಯಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಸಿ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ದಲಿತ ಮುಖಂಡರಾದ ಸು.ಧಾ.ವೆಂಕಟೇಶ್, ಬಿ.ಎನ್.ಗಂಗಾಧರ್ ಮತ್ತಿತರರು ಇದ್ದರು.

ನವ ಭಾರತ ನಿರ್ಮಾಣಕ್ಕೆ ಕೊಡುಗೆ: ಜಗಜೀವನರಾಮ್ ಅವರು ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಹರಿಕಾರ ಎಂದೇ ಖ್ಯಾತಿ ಗಳಿಸಿ ದೇಶದ ಆಹಾರದ ಭದ್ರತೆಗೆ ಬುನಾದಿ ಹಾಕಿದ್ದರು. ನವ ಭಾರತ ನಿರ್ಮಾಣಕ್ಕಾಗಿ ಶ್ರಮಿಸಿದ ಅನೇಕರಲ್ಲಿ ಬಾಬೂಜಿ ಪ್ರಮುಖರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಆರ್ಥಿಕ ಪ್ರಗತಿಯತ್ತ ಸಾಗಬೇಕು. ಬಾಬೂಜಿಯವರಂತೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ತಮ ನಾಯಕರಾಗಿ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ನಿವೇಶನ ಹಂಚಿಕೆಗೆ ಕ್ರಮ: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗಾಗಿ 23 ಸಾವಿರ ನಿವೇಶನಗಳನ್ನು ಗುರುತಿಸಿ ಮೀಸಲಿಡಲಾಗಿದ್ದು, ಮೂರು ತಿಂಗಳೊಳಗಾಗಿ ಅಷ್ಟೂ ಜನರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ನಿಯಮ 53ರ ಅಡಿ ಅರ್ಜಿ ಹಾಕಿಕೊಂಡಿರುವ 421 ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ 879 ಎಕರೆ ಜಮೀನನ್ನು ನೀಡಲಾಗಿದೆ. ಪರಿಶಿಷ್ಟ ಪಂಗಡದವರಿಗೆ 400 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 281 ಕೊಳವೆ ಬಾವಿ ಕೊರೆಸಿಕೊಡಲಾಗಿದೆ. 114 ಬಾಕಿ ಉಳಿದಿದೆ. ಜಿಲ್ಲಾ ಕೇಂದ್ರದಲ್ಲಿ 59 ಭವನಗಳಿಗೆ ಮಂಜೂರಾಗಿವೆ. ಕೈಗಾರಿಕಾ ಪ್ರದೇಶ ವಲಯಕ್ಕೂ ಪ್ರದೇಶ ಗುರುತಿಸಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಭವನ ನಿರ್ಮಾಣ ಶಂಕುಸ್ಥಾಪನೆ: ಕಾರ್ಯಕ್ರಮಕ್ಕೂ ಮೊದಲು ಡಾ.ಬಾಬು ಜಗಜೀವನರಾಮ್ ಅವರ ಹೆಸರಿನ ಜಿಲ್ಲಾ ಮಟ್ಟದ ಭವನದ ಕಟ್ಟದ ಕಾಮಗಾರಿಗೆ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net