

ಬೀದರ್: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿ. ಡಾ.ಬಾಬುಜಗಜೀವನ ರಾಮ್ ಅವರ 115ನೇ ಜಯಂತ್ಯುತ್ಸವ ಮಂಗಳವಾರ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಜಗಜೀವನ ರಾಮ್ ಭಾವಚಿತ್ರದ ಭವ್ಯ ಮೆರವಣಿಗೆ, ವಿಶೇಷ ಉಪನ್ಯಾಸ ನಡೆದವು. ಅವರ ಜೀವನ ಹಾಗೂ ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಯಿತು.
ನಗರದಲ್ಲಿ ಜಿಲ್ಲಾಡಳಿತದಿಂದ ಜಯಂತಿ ನಡೆಯಿತು. ಡಿಸಿ ಕಚೇರಿಯಿಂದ ರಂಗಮಂದಿರದವರೆಗೆ ಅಲಂಕೃತ ವಾಹನದಲ್ಲಿ ಡಾ. ಜಗಜೀವನ ರಾಮ್ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.
ನಂತರ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ರಹೀಮ್ ಖಾನ್ ಉದ್ಘಾಟಿಸಿ ಮಾತನಾಡಿ, ಮಹಾನ್ ಮಾನವತಾವಾದಿ ಡಾ.ಬಾಬುಜಗಜೀವನ ರಾಮ್ ಅವರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಾಬೂಜಿ ಅವರ ಸಮುದಾಯ ಭವನ ನಿರ್ಮಾಣಕ್ಕೆ ನನ್ನ ಅನುದಾನದಿಂದ 25 ಲಕ್ಷ ರೂ. ನೀಡುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಗೋವಿಂದರಡ್ಡಿ ಮಾತನಾಡಿ, ಈ ನೆಲದಿಂದ ಬಡತನ ತೊಲಗಬೇಕು. ಸರ್ವರೂ ನೆಮ್ಮದಿಯಿಂದ ಬಾಳಬೇಕು ಎಂದು ಬಯಸಿದ್ದ ಡಾ.ಬಾಬುಜಗಜೀವನ ರಾಮ್ ಅವರಂಥ ಮಹಾನ್ ನಾಯಕರು ಇಂದಿನ ಯುವಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.
ಮನೋಹರ ಮಂಡೋಲಿಕರ್ ಉಪನ್ಯಾಸ ನೀಡಿ, ದೇಶಾದ್ಯಾಂತ ಬಾಬೂಜಿ ಎಂದೇ ಕರೆಯಲ್ಪಡುವ ಜಗಜೀವನರಾಂ ಅವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರೃ ಮತ್ತು ಸಾಮಾಜಿಕ ನ್ಯಾಯದ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು ಎಂದು ಬಣ್ಣಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಜಿಪಂ ಸಿಇಒ ಜಹೀರಾ ನಸೀಮ್, ಎಸ್ಪಿ ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮೀ, ಪ್ರಮುಖರಾದ ರಾಜು ಕಡ್ಯಾಳ, ಚಂದ್ರಕಾಂತ ಹಿಪ್ಪಳಗಾಂವ, ನರ್ಾಂಡಿಸ್ ಹಿಪ್ಪಳಗಾಂವ, ಜಗನ್ನಾಥ ಜೀರ್ಗಾ, ಕೆ.ರಾಮದಾಸ, ರಮೇಶ ಕಟ್ಟಿ ತೂಗಾಂವ, ರಮೇಶ ಡೋಣೆ, ಶಾಮಣ್ಣ ಬಂಬಳಗಿ, ವಿಠ್ಠಲರಾವ ಸಿಪ್ಪೆಕರ್ ಇತರರಿದ್ದರು.