ಬಾಬಾ ಸಾಹೇಬ್ ಮಹಾನ್ ಮಾನವತಾವಾದಿ

20221206105114_IMG_7237
Published on


ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಬೇಕಾದ ಮಹಾನ್ ನಾಯಕರವರು. ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ಚೇತನ ಎಂದು ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ತಿಳಿಸಿದರು.

ಇಲ್ಲಿನ ಪಕ್ಷ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾ ಸಾಹೇಬರು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುವ ನಮ್ಮ ದೇಶದ ಸಂವಿಧಾನವನ್ನು ರಚಿಸಿದ ಮಹಾನ್ ನಾಯಕರು. ಅಲ್ಲದೆ ಮಹಾನ್ ಮಾನವತಾವಾದಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಮಹಾ ಪರಿನಿರ್ವಾಣ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ನೆಲೆಗಟ್ಟಿನಲ್ಲಿ ಜೀವನ ರೂಪಿಸಿಕೊಂಡಿದ್ದ ಅಂಬೇಡ್ಕರ್ ಜೀವನಾದರ್ಶಗಳನ್ನು ಯುವ ಪೀಳಿಗೆ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸಬೇಕು. ಅಸ್ಪಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಅವರು ಬಳಿಕ ಇಡೀ ವಿಶ್ವವೇ ಗೌರವಿಸುವಂಥ ನಾಯಕರಾಗಿ ರೂಪುಗೊಂಡಿದ್ದಾರೆ. ಅದೆಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net