

ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಮುಂಬೈನಲ್ಲಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿತು.
ದೇಶದ ವಿವಿಧ ರಾಜ್ಯಗಳಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಿದ್ದ ಸಮಿತಿಯು ಈ ಬಾರಿ ಮುಂಬೈನಲ್ಲಿ ಆಚರಣೆ ಮಾಡಿತು. ದಾದರ್‍ನ ಚೈತ್ಯ ಭೂಮಿಯಲ್ಲಿ ಇರುವ ಸಂವಿಧಾನ ಶಿಲ್ಪಿಯ ಸ್ಮಾರಕಕ್ಕೆ ಜ್ಯೋತಿ ಬೆಳಗಿ, ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಶಿವ ಮಂದಿರದ ಹವಾ ಮಲ್ಲಿನಾಥ ಮಹಾರಾಜ ಆಶ್ರಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು.
ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರು ಮಾತನಾಡಿ, ಜಾತಿ, ಧರ್ಮಕ್ಕಿಂತ ಇಂದು ಎಲ್ಲರಿಗೂ ದೇಶವೇ ಮೊದಲು ಆಗಬೇಕು. ಭ್ರಾತೃತ್ವದ ಭಾವನೆ, ದೇಶ ಪ್ರೇಮ ಹಾಗೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಡಾ. ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದು ಸಲಹೆ ಮಾಡಿದರು.
ಚಿಂತಕ ದಾಸರಾವ್ ಹಂಬಾರಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಮೋಹನ್ ಹರಡೆ, ಮುಂಬೈನ ವಿದ್ಯಾ ಭಾವಕರೆ, ಪ್ರಕಾಶ ವಾಂಗೆ, ಅಕ್ಲುವರ್ ನಾಂದೇಡ್, ಸುಪ್ರಿಯಾ ಜಗಡೆ, ಪ್ರಭಾಕರರಾವ್, ಬಾಲಾಜಿ ಬಿರಾದಾರ ಲಾತೂರ, ಡಾ. ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ಪ್ರಮುಖರಾದ ಪಪ್ಪು ಪಾಟೀಲ ಖಾನಾಪುರ, ಮಲ್ಲಿಕಾರ್ಜುನ ಸಾರವಾಡ, ಸಂದೇಶ ಪವಾರ್, ರಾಜಶೇಖರ ರೆಡ್ಡಿ ಸೇಡಂ, ಅರುಣ ಬಬಲಾದಕರ್, ಉಮೇಶ ನಡಗೇರಿ, ಮಲ್ಲು ಚೆಲಗೇರಿ, ಸಂತೋಷ ಅಣೂರ, ರೇವಪ್ಪ ಮಮದಾಪುರ, ಶಿವಾಜಿ, ನಾಗರಾಜ ವಿರಾರ, ಬಸವರಾಜ ಡಾಂಗೆ ಮೊದಲಾದವರು ಇದ್ದರು.
ಇದಕ್ಕೂ ಮುನ್ನ ಜಯಂತಿ ನಿಮಿತ್ತ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಿಂದ ಮುಂಬೈಗೆ ಬಂದ ದೇಶ ಭಕ್ತರ ಯಾತ್ರೆಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ದೇಶದ ವಿವಿಧ ರಾಜ್ಯಗಳ ದೇಶ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.