ಬಾನು ಮುಷ್ತಾಕ್ ಆಹ್ವಾನಿಸಬಾರದೆಂಬ ನಿಯಮ ಇದೆಯೇ?: ಕಾರ್ಮಿಕ ಸಚಿವ ಸಂತೋಷ ಲಾಡ್ ಪಶ್ನೆ

23 Dwd 1 Santosh Lad
Published on

ಮೈಸೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದು ಎಂದು ಸಂವಿಧಾನದಲ್ಲಿ ನಿಯಮ ಏನಾದರೂ ಇದೆಯೇ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ರಾಮಮಂದಿರ ಓಪನ್ ಮಾಡಿದಾಗ ಪೂಜೆ ಮಾಡಿದ್ದು ಯಾರು? ಆಗ ಶಿಷ್ಟಾಚಾರ ಉಲ್ಲಂಘನೆ ಆಗಿಲ್ವೇ?

ಇಂತಹದರಲ್ಲಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬಾರದು ಎಂದು ಏನಾದರೂ ಇದೆಯೇ? ನಾನು ಕೂಡ ಹಿಂದು. ನಮ್ಮ ಮನೆಗಳಲ್ಲಿ ಯಾವುದೇ ಪೂಜೆ ಮಾಡಿದರೆ ಯಾರು ಮಾಡ್ತಾರೆ ಎಂದು ಪ್ರಶ್ನಿಸಿದರು.

ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚಿಸಿದ ಕ್ರಮವನ್ನು ಬಿಜೆಪಿಯವರು ಮೊದಲು ಏಕೆ ಸ್ವಾಗತ ಮಾಡಿದ್ದರು. ಮೊದಲೇ ವಿದೇಶಿ ಫಂಡಿಂಗ್ ಬಗ್ಗೆ ಏಕೆ ಮಾತನಾಡಲಿಲ್ಲ.

ಮೃತ ದೇಹಗಳು ಸಿಗದಿದ್ದಕ್ಕೆ ರಾಜಕೀಯ ಲಾಭ ಪಡೆಯಲು ಇದೀಗ ಮುಂದಾಗಿದ್ದಾರೆ. ಧರ್ಮಸ್ಥಳದ ಮೇಲೆ ಒಂದು ಕಳಂಕ ಇತ್ತು. ಕೆಲವರು ಧರ್ಮಸ್ಥಳದ ಮೇಲೆ ಆರೋಪ ಮಾಡಿದ್ದರು. ಎಸ್‌ಐಟಿ ತನಿಖೆ ಮೂಲಕ ರಾಜ್ಯಕ್ಕೆ ಬೆಳಕು ಚೆಲ್ಲಲಾಯಿತು. ಸತ್ಯ ಹೊರ ಬರಲಿದೆ ಎಂದೂ ಹೇಳಿದರು.

ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಏಕೆ ಕರೆಯಲಿಲ್ಲ. ಮೊದಲು ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಮುರ್ಮ ಅವರು ವಿಧವೆ ಅಥವಾ ಎಸ್‌ಟಿ ಸಮುದಾಯ ಎಂಬ ಕಾರಣಕ್ಕೆ ಆಹ್ವಾನಿಸಲಿಲ್ಲವೇ? ಹೆಣ್ಮಕ್ಕನ್ನು ಗೌರವದಿಂದ ಕಾಣದೆ ಇರೋದೇ ಬಿಜೆಪಿ ಐಡಿಯಾಲಜಿ. ಆ ಪಕ್ಷದಲ್ಲಿ ಯಾರು ಸಹ ಹೆಣ್ಮಕ್ಕಳನ್ನು ಗೌರವಿಸಲ್ಲ ಎಂದು ಹರಿಹಾಯ್ದರು.

ಪಾಕಿಸ್ತಾನ ಮುಸಲ್ಮಾನ ವಿಚಾರ ಮಾತನಾಡೋದು ಬಿಜೆಪಿ ನಾಯಕರೇ. ಸಿಂಧೂರ ಬಗ್ಗೆ ಮಾತನಾಡೋರು ಪಾಕಿಸ್ತಾನ ಜತೆಗೆ ಈಗ ಮ್ಯಾಚ್ ಆಡ್ತಿದ್ದಾರೆ. ಪಾಕಿಸ್ತಾನಕ್ಕೆ ನೀರು ಕೊಡಲ್ಲ ಅಂತಾರೆ. ಚೀನಾ ವಸ್ತುಗಳ ನಿಷೇಧ ಮಾಡ್ತೀವಿ ಅಂತಾರೆ. ಈಗ ಚೀನಾಕ್ಕೆ ಹೋಗಿ ಶೇಕ್ ಹ್ಯಾಂಡ್ ಮಾಡ್ತಾರೆ. ಭಾರತ- ಪಾಕಿಸ್ತಾನ ಯುದ್ಧದಲ್ಲಿ ಪಾಕ್‌ಗೆ ಚೀನಾ ದೇಶ ಬೆಂಬಲ ಕೊಟ್ಟಿದೆ.

ಪಾಕಿಸ್ತಾನ ಚೀನಾ ಜತೆಯಾಗಿ ಭಾರತದ ಯುದ್ಧ ಮಾಡಿದ್ದು. ಈಗ ಅದೇ ಚೀನಾಗೆ ಹೋಗಿ ಶೇಕ್ ಹ್ಯಾಂಡ್ ಮಾಡಿ ಬರ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸವನ್ನು ಟೀಕಿಸಿದರು.

ಗಾಂಧೀಜಿ ಕೊಂದಿದ್ದು ಆರ್‌ಎಸ್‌ಎಸ್‌ನವರು ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಸಿಎಂ ಹೇಳಿರೋದ್ರಲ್ಲಿ ಏನಾದರೂ ಡೌಟ್ ಇದೆಯೇ? ಗಾಂಧೀಜಿ ಕೊಂದಿದ್ದು ಯಾರು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net