

ಬಾಗಲಕೋಟೆ: ಬಾಣಂತಿಯರ ಸರಣಿ ಸಾವಿನ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜಿನಾಮೆ ನೀಡಬೇಕು, ಬಾಣಂತಿಯ ಸುರಕ್ಷತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಬಡವರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಹೋಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಮೆಡಿಕಲ್ ಸೌಲಭ್ಯವಿಲ್ಲ. ತಾಯಂದಿರಿಗೆ ಸಕಾಲಕ್ಕೆ ವೈದ್ಯರು ಲಭ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯ ಕೊರೆಯಿಂದಾಗಿ ಬಾಣಂತಿಯರ ಸಾವಿಗೆ ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ಇಂತಹ ದುಷ್ಟತನ ಸರ್ಕಾರ ನೋಡಿಲ್ಲ ಎಂದು ಕಿಡಿಕಾರಿದರು.
ಒಂದು, ಎರಡು ಘಟನೆ ನಡೆದಾಗ ಆಕಸ್ಮಿಕ ಎಂದುಕೊಂಡಿದ್ದವು. ಆದರೇ ಬಾಣಂತಿಯರ ಸರಣಿ ಸಾವು ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಎತ್ತಿ ತೋರಿಸುತ್ತಿದೆ. ಎರಡು, ಮೂರು ತಿಂಗಳಾದರು ವ್ಯವಸ್ಥೆ ಸುಧಾರಣೆಯಾಗಿಲ್ಲ. ಕೂಡಲೇ ಬಾಣಂತಿಯರ ಸಾವಿಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ ರಾಜೀನಾಮೆ ನೀಡಬೇಕು. ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ ಮಾತನಾಡಿ, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಾಗುತ್ತಿದ್ದರು ಸಹ ಕಾಂಗ್ರೆಸ್ ಸರ್ಕಾರ ಮಾತ್ರ ಇನ್ನು ನಿದ್ರೆಯಿಂದ ಎದ್ದಿಲ್ಲ. ಸರ್ಕಾರಿ ಆಸ್ಪತ್ರೆಗಳು ಶವಗಾರವಾಗಿ ಎಚ್ಚರವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕೂಡಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ಸುಮೇದಾ ಮಾನೆ, ಮುಖಂಡರಾದ ಭಾಗ್ಯಾ ಹುದ್ನೂರ, ವೈಷ್ಣವಿ ಬಾಗೇವಾಡಿ, ಸುಜಾತಾ ಶಿಂಧೆ, ಭಾಗಿರತಿ ಪಾಟೀಲ, ಕಾವೇರಿ ರಾಥೋಡ. ಗೀತಾ ಸೂರ್ಯವಂಶಿ, ಶಶಿಕಲಾ ಮಜ್ಜಗಿ, ಪಾರ್ವತಿ ಹುಗ್ಗಿ, ಸಾವಿತ್ರಿ ಜೋಗುರ, ಶಿವಲೀಲಾ ಪಟ್ಟಣಶೆಟ್ಟಿ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ನಾಯ್ಕರ, ಸತ್ಯನಾರಾಯಣ ಹೆಮಾದ್ರಿ, ಸುರೇಶ ಕೋಣ್ಣುರ, ಗುಂಡುರಾವ ಶಿಂಧೆ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಸೇರಿದಂತೆ ಇತರರು ಇದ್ದರು.