

ಕಲಬುರಗಿ: ಆಕೆ ಬಾಣಂತಿ. ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದಳು. ಇನ್ನೊಂದೆಡೆ ಅದೇ ತಾನೆ ಜನಿಸಿದ ಮಗುವೂ ಸಂಕಷ್ಟದಲ್ಲಿತ್ತು. ಈ ವಿಷಯ ಗೊತ್ತಾಗುತ್ತಲೇ ಸಂಸದ ಡಾ.ಉಮೇಶ ಜಾಧವ್ ಖಾಸಗಿ ಆಸ್ಪತ್ರೆಗೆ ಸೇರಿಸಿ ಇಬ್ಬರಿಗೂ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹಿಂದೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದ ಸಂಸದರು ಈಗ ಮತ್ತೊಮ್ಮೆ ತಮ್ಮ ಮೂಲ ವೃತ್ತಿಯ ಬದ್ಧತೆ ಜತೆಗೆ ಮಾನವೀಯ ಕಾಳಜಿಯನ್ನು ತೋರಿಸಿದ್ದಾರೆ.
ಶುಕ್ರವಾರ ಸಂಜೆ ಜೇವರ್ಗಿ ತಾಲೂಕಿನ ಕುಳಗೇರಿ ಗ್ರಾಮದ ಅಕ್ಷತಾ ಎನ್ನುವವರಿಗೆ ಹೆರಿಗೆ ಆಯಿತು. ಕೆಲವೆ ಗಂಟೆಗಳಲ್ಲಿ ರಕ್ತಸ್ರಾವ ಶುರುವಾಯಿತು. ತಕ್ಷಣವೇ ಅವರನ್ನು ಮಳ್ಳಿ ಗ್ರಾಮದಲ್ಲಿರುವ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಕುಟುಂಬದ ಸದಸ್ಯರು ನಿರ್ಧರಿಸಿದರು. ಇವರನ್ನು ಪರೀಕ್ಷಿಸಿದ ವೈದ್ಯರು ಶಹಾಪುರ ಇಲ್ಲವೇ ಯಾದಗಿರಿಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
ಕುಟುಂಬದವರು ಆಂಬುಲೆನ್ಸ್ನಲ್ಲಿ ಕಲಬುರಗಿಗೆ ರಾತ್ರಿ ಕರೆತಂದು ನಾಲ್ಕಾರು ಆಸ್ಪತ್ರೆ ಸುತ್ತಿದ್ದಾರೆ. ಆಂಬುಲೆನ್ಸ್ ಸುತ್ತುತ್ತಿರುವ
ವಿಷಯವನ್ನು ವ್ಯಕ್ತಿಯೊಬ್ಬರು ಐವಾನ್-ಎ-ಶಾಹಿ ಪ್ರವಾಸಿ ಮಂದಿರದಲ್ಲಿದ್ದ ಸಂಸದ ಡಾ.ಜಾಧವ್ ಗಮನಕ್ಕೆ ತಂದರು. ತಕ್ಷಣವೇ ಕಾರ್ಯನಿರತರಾದ ಸಂಸದರು, ಖಾಸಗಿ ಕಾರಿನಲ್ಲಿ ಆಂಬುಲೆನ್ಸ್ ಇರುವ ಸ್ಥಳಕ್ಕೆ ತೆರಳಿದಾಗ ಬಾಣಂತಿ ಮತ್ತು ಮನೆಯವರು ಚೀರಾಡುತ್ತಿರುವುದು, ಮಗು ಅಳುತ್ತಿರುವುದು ಕೇಳಿಸಿದೆ. ಡಾ. ಜಾಧವ ಅವರು ಕೆಲ ಸಮಯ ಭಾವುಕರಾಗಿ ಅದೇ ಆಂಬುಲೆನ್ಸ್ನಲ್ಲಿ ಬಸ್ ನಿಲ್ದಾಣ ಹತ್ತಿರದ ಸಂಗಮೇಶ್ವರ ಆಸ್ಪತ್ರೆಗೆ ಮಗು ಮತ್ತು ತಾಯಿಯನ್ನು ದಾಖಲಿಸಿ ಕೂಡಲೇ ಚಿಕಿತ್ಸೆ ನೀಡುವಂತೆ ಅಲ್ಲಿದ್ದ ವೈದ್ಯರಿಗೆ ಮನವಿ ಮಾಡಿದ್ದಾರೆ.
ಮಗುವಿನ ಮೈ ಸಂಪೂರ್ಣ ಹಸಿರಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಇಬ್ಬರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಇಡೀ ರಾತ್ರಿ ತೀವ್ರ ಕಾಳಜಿ ವಹಿಸಿದ್ದ ಸಂಸದ ಡಾ.ಜಾಧವ್ ಶನಿವಾರ ಮತ್ತೆ ಆಸ್ಪತ್ರೆಗೆ ತೆರಳಿ ಕುಟುಂಬದವರು ಮತ್ತು ವೈದ್ಯರ ಜತೆ ಚರ್ಚಿಸಿ ಮಾಹಿತಿ ಪಡೆದು ಸೂಕ್ತ ಆರೈಕೆ ಮಾಡುವಂತೆ ಸೂಚಿಸಿದರಲ್ಲದೇ ಇವರ ಚಿಕಿತ್ಸೆ ತಗಲುವ ವೆಚ್ಚವನ್ನು ತಾವೇ ಭರಿಸಿದ್ದಾರೆ.