

ಹೊಳೆಆಲೂರ: ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಹೊಳೆಆಲೂರ ಭಾಗದ ರೈತರಿಗೆ ನಿರಾಸೆಯಾಗಿದೆ. ಈಗ ಅತಿ ಕಡಿಮೆ ಮಳೆಯಾಗಿರುವುದು ಕೃಷಿಕರನ್ನು ಕಂಗಾಲಾಗುವಂತೆ ಮಾಡಿದೆ.
ಕಳೆದ ವರ್ಷ ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ಪ್ರಭಾವದಿಂದ ಹಿಂಗಾರು ಬೆಳೆ ಕಳೆದುಕೊಂಡಿದ್ದ ಈ ಭಾಗದ ರೈತರು ಈ ಸಲ ಉತ್ತಮ ಮಳೆ, ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಮುಂಚಿತವಾಗಿ ಹೊಲ ಮಡಿಕೆ ಹೊಡಿಸಿ, ಕಸ-ಕಡ್ಡಿ ಆರಿಸಿ ಸ್ವಚ್ಛಗೊಳಿಸಿ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಅಶ್ವಿನಿ ಮಳೆ ಹೊರತುಪಡಿಸಿ ಇದುವರೆಗೆ ಭರಣಿ, ಕೃತಿಕಾ, ರೋಹಿಣಿಯಂತಹ ನಂಬಿಕಸ್ಥ ಮಳೆಗಳೇ ಕೈ ಕೊಟ್ಟಿವೆ.
ಈ ಭಾಗದ ಮಣ್ಣಿನಲ್ಲಿ ಹೆಸರು, ಗೋವಿನಜೋಳ, ಶೇಂಗಾ ಬೆಳೆಗಳಿಗೆ ಉತ್ತಮ ಇಳುವರಿ ಬರುತ್ತದೆ. ಅಲ್ಪ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿತ್ತು. ಆದರೂ ರೈತರು ಇಂದಲ್ಲ ನಾಳೆ ರೋಹಿಣಿ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಧೈರ್ಯ ಮಾಡಿ ಒಣ ಮಣ್ಣಿನಲ್ಲಿಯೇ ಬಿತ್ತಿದ್ದರು. ಆದರೀಗ ಮೊಳಕೆಯೊಡೆದ ಬೀಜಗಳು ಬಿಸಿಲು ಹಾಗೂ ಗಾಳಿಯ ಹೊಡೆತಕ್ಕೆ ಬಾಡುತ್ತಿವೆ. ಅರಹುಣಿಸಿ, ಮಲ್ಲಾಪುರ, ಸಂದಿಗವಾಡ, ಹುಲ್ಲೂರ ಗ್ರಾಮಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದನ್ನು ಹೊರತುಪಡಿಸಿ ಪ್ರವಾಹದ ಸೆಳೆತಕ್ಕೆ ಸಿಲುಕಿ ಕೈ ಖಾಲಿ ಮಡಿಕೊಂಡಿರುವ ಹೊಳೆಆಲೂರ, ಗಾಡಗೋಳಿ, ಹುನಗುಂಡಿ, ಬೆನಹಾಳ, ಹೊಳೆಮಣ್ಣೂರ, ಹೊಳೆಹಡಗಲಿ, ಮೆಣಸಗಿ, ಅಮರಗೋಳ, ಬಸರಕೋಡ, ಬಿ.ಎಸ್. ಬೇಲೇರಿ, ಅಸೂಟಿ, ಮೇಗೂರ, ಮಾಳವಾಡ, ಕರಮುಡಿ, ಸೋಮನಕಟ್ಟಿ, ಕರಕಿಕಟ್ಟಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅತಿ ಕನಿಷ್ಠ ಮಳೆಯಾಗಿದೆ. ಶೇ. 30ರಿಂದ 40ರಷ್ಟು ಭೂಮಿಯಲ್ಲಿ ಮಾತ್ರ ಬಿತ್ತನೆಯಾಗಿದೆ. ತೇವಾಂಶ ಕೊರತೆಯಿಂದ ಬೆಳೆಗಳೆಲ್ಲ ಒಣಗತೊಡಗಿವೆ. ಇನ್ನು ಅರ್ಧಕ್ಕಿಂತ ಹೆಚ್ಚು ರೈತರು ಬಿತ್ತನೆ ಮಾಡಿಲ್ಲ. ಇನ್ನೊಂದು ವಾರದಲ್ಲಿ ಮಳೆಯಾದರಷ್ಟೇ ಶೇಂಗಾ, ಸೂರ್ಯಕಾಂತಿ, ಸಜ್ಜೆ ಬೀಜ ಬಿತ್ತಬಹುದು. ಇಲ್ಲವಾದರೆ, ಈ ಬಾರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಮುಂಗಾರು ಮಳೆ ಸುರಿದರಷ್ಟೇ ರೈತನಿಗೆ ಹರ್ಷ. ಆದರೆ, ಕಳೆದ ಎರಡು ವರ್ಷಗಳಿಂದ ಮಳೆರಾಯ ರೈತರ ಜೀವನದೊಂದಗೆ ಚೆಲ್ಲಾಟವಾಡುತ್ತಿದ್ದಾನೆ. ಇದರಿಂದಾಗಿ ನಮಗೆ ದಿಕ್ಕು ತೋಚದಂತಾಗಿದೆ.| ಮುತ್ತಣ್ಣ ಜಂಗಣ್ಣವರ ಬೆನಹಾಳ ರೈತ
ಈ ಭಾಗದಲ್ಲಿ ಕಳೆದ ಬಾರಿ ಪ್ರವಾಹದಿಂದ ರೈತರು ಸಾಕಷ್ಟು ಹಾನಿ ಅನುಭವಿಸಿದ್ದರು. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಹೆಸರು, ಸಜ್ಜೆ , ಗೋವಿನಜೋಳ, ಶೇಂಗಾ ಸೇರಿ ಎಲ್ಲ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. ರಸಗೊಬ್ಬರ, ಕ್ರೀಮಿನಾಶಕ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಮುಂಗಾರು ಏಕೋ ಮುನಿಸಿಕೊಂಡಿದೆ. ಉಳ್ಳಾಗಡ್ಡಿ ಬಿತ್ತನೆಗೆ ಇನ್ನೂ ಸಮಯವಿದೆ. ಇಂಥ ಸಂದರ್ಭದಲ್ಲಿ ರೈತರು ಸಿರಿ ಧಾನ್ಯಗಳತ್ತ ಮನಸ್ಸು ಮಾಡಬೇಕು.| ಸಾವಿತ್ರಿ ಶಿವನಗೌಡರ ಹೊಳೆಆಲೂರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
125 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
ಹೊಳೆಆಲೂರ ಹೋಬಳಿಯಲ್ಲಿ 34 ಸಾವಿರ ಹೆಕ್ಟೇರ್ ಸಾಗುವಳಿ ಭೂಮಿ ಪೈಕಿ 25 ಸಾವಿರ ಹೇಕ್ಟರ್ ಭೂಮಿ ಬಿತ್ತನೆ ಗುರಿ ಹೊಂದಲಾಗಿದೆ. ಕೃಷಿ ಇಲಾಖೆ ಪ್ರಕಾರ 5 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತನೆಯಾಗಬೇಕು. ಸದ್ಯ 2,500 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ರೈತ ಸಂಪರ್ಕ ಕೇಂದ್ರದಿಂದ 116 ಕ್ವಿಂಟಾಲ್ ಹೆಸರು, 45 ಕ್ವಿಂಟಾಲ್ ಶೇಂಗಾ ಬೀಜ ಮಾರಾಟವಾಗಿದ್ದರೂ ಅದು ಬಿತ್ತನೆ
ಆಗುವ ಬದಲು ರೈತರ ಮನೆಯಲ್ಲಿ ಹಾಗೇ ಉಳಿದಿದೆ. 130 ಕ್ವಿಂಟಾಲ್ ಗೋವಿನಜೋಳದ ಬಿತ್ತನೆ ಬೀಜಗಳಲ್ಲಿ 30 ಕ್ವಿಂಟಾಲ್ ಬೀಜ ಮಾತ್ರ ಮಾರಾಟವಾಗಿದೆ. 12 ಕ್ವಿಂಟಾಲ್ ಸೂರ್ಯಕಾಂತಿ ಬೀಜದ ಸಂಗ್ರಹವಿದ್ದರೂ 60 ಕೆಜಿಯಷ್ಟು ಮಾತ್ರ ಮಾರಾಟವಾಗಿದೆ.
EndFragment