

ಚಿತ್ರದುರ್ಗ: ರೈತರಿಂದ ಮಿತಿ ಮೀರಿದ ಬಾಡಿಗೆ ಪಡೆಯುವ ಬೆಳೆ ಕಟಾವು ಯಂತ್ರಗಳ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕೃಷಿ ಇಲಾಖೆ ಅಧಿಕಾರಿಗಳು, ರೈತ ಮುಖಂಡರ ಹಾಗೂ ಕಟಾವು ಯಂತ್ರಗಳ ಮಾಲೀಕರೊಂದಿಗೆ, ಯಂತ್ರಗಳ ಬಾಡಿಗೆ ದರ ನಿಗದಿ ಕುರಿತ ಸಭೆಯಲ್ಲಿ ಮಾತನಾಡಿದರು.
ರೈತರಿಗೆ ಶೋಷಣೆ ಆಗದಂತೆ ಬಾಡಿಗೆ ಪಡೆಯಬೇಕು. ಸಭೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಾಡಿಗೆ ವಸೂಲಿ ಮಾಡಿದರೆ ವಾಹನಗಳನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಲಾಗುವುದೆಂದು ಎಚ್ಚರಿಸಿದರು.
ಜಿಲ್ಲೆಯ, ಹೊರ ಜಿಲ್ಲೆಗಳ ಕಟಾವು ಯಂತ್ರಗಳು ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಬೇಕು. ನಿಗದಿತ ದರ ನಿರಾಕರಿಸಿ ಹೊರ ಜಿಲ್ಲೆಗಳಿಗೆ ಹೋಗುವ ವಾಹನಗಳನ್ನೂ ಸೀಜ್ ಮಾಡಿಸಲಾಗುವುದು, ಬಾಡಿಗೆಗೆ ಸಂಬಂಧಿಸಿದಂತೆ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ, ಹೆಲ್ಪ್ ಡೆಸ್ಕ್ ತೆರೆಯುವಂತೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್‌ಗೆ ಸೂಚಿಸಿದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 2 ಲಕ್ಷ ಹೆಕ್ಟೇರ್ ಹೆಚ್ಚಿನ ವಿಸ್ತೀರ್ಣದಲ್ಲಿ ಮೆಕ್ಕೆಜೋಳ, ರಾಗಿ, ಸಿರಿಧಾನ್ಯ, ತೊಗರಿ ಸೇರಿದಂತೆ ಮತ್ತಿತರ ಬೆಳೆಗಳಿವೆ. ತಮಿಳುನಾಡು, ಹರಿಯಾಣ ಮತ್ತಿತರ ಭಾಗಗಳಿಂದ ಕಟಾವು ಯಂತ್ರಗಳು ಬಂದಿವೆ. ರೈತರು ಹೆಚ್ಚು ಬಾಡಿಗೆ ಹಣ ನೀಡಿ ಕಟಾವು ಮಾಡಿಸುತ್ತಿದ್ದು, ರೈತರ ಮನವಿ ಮೇರೆಗೆ ಏಕರೂಪ ದರ ನಿಗದಿಪಡಿಸಲಾಗಿದೆ. ಮೆಕ್ಕೆಜೋಳ ಒಂದು ಎಕರೆಗೆ 2300 ರೂ, ರಾಗಿ ಒಂದು ಎಕರೆಗೆ 2500 ರೂ, ಕಡ್ಲೆ ಒಂದು ಡ್ರಮ್‌ಗೆ 800 ರೂ. ನಿಗದಿಪಡಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದರು. ಜಿಲ್ಲೆಯಲ್ಲಿ ತೋಗರಿ ಖರೀದಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ್, ರುದ್ರಸ್ವಾಮಿ, ತಿಪ್ಪೇಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಬಸ್ತಿಹಳ್ಳಿ ಸುರೇಶ್‌ಬಾಬು, ತಿಪ್ಪೇಸ್ವಾಮಿ ಮತ್ತಿತರ ರೈತ ಮುಖಂಡರು, ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕರಾದ ಎನ್.ಚಂದ್ರಕುಮಾರ್,ಅಶೋಕ್, ಪ್ರಕಾಶ್, ರಾಮ ಕೃಷ್ಣ, ಶಂಕರ್‌ಮೂರ್ತಿ,ಸಿದ್ದೇಶ್ ಇತರರು ಇದ್ದರು.