

ಹೊಳೆನರಸೀಪುರ: ಬಾಡಿಗೆ ಕಟ್ಟದ ಪುರಸಭೆ ಮಳಿಗೆಗಳಿಗೆ ಬೀಗ ಹಾಕಿ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಪಟ್ಟಣದ ಪುರಸಭೆಯ ಎಚ್.ಡಿ. ದೇವೇಗೌಡ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಎಚ್.ಕೆ. ಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಮಳಿಗೆಗಳನ್ನು ಬಾಡಿಗೆ ಪಡೆದಿರುವವರು ಸುಮಾರು 4 ಲಕ್ಷ ರೂ.ವರೆಗೂ ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣವನ್ನು ಶೀಘ್ರದಲ್ಲಿ ಸಂದಾಯ ಮಾಡಬೇಕು. ಅಂಥವರಿಗೆ ಪುರಸಭೆಯಿಂದ ನೋಟಿಸ್ ನೀಡಿ, ನೋಟಿಸ್ ನೀಡಿದ ವಾರದೊಳಗೆ ಬಾಡಿಗೆ ಕಟ್ಟದಿದ್ದರೆ ಅಂತಹ ಮಳಿಗೆಗಳಿಗೆ ಬೇಗ ಹಾಕಿ ಎಂದು ಪುರಸಭೆ ಸಿಬ್ಬಂದಿಗೆ ತಾಕೀತು ಮಾಡಿದರು.
ಪಟ್ಟಣದ 23 ವಾಡ್‌ಗಳಿಗೆ ಸಮಗ್ರ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ ನೂತನವಾಗಿ ಕಾಮಗಾರಿ ನಡೆಸಲು ಸರ್ಕಾರಕ್ಕೆ 114 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆದರೆ ಸರ್ಕಾರದಿಂದ ಮಂಜೂರಾತಿ ಬಾಕಿ ಇದೆ ಎಂದು ಸಭೆಗೆ ತಿಳಿಸಿದರು.
ತಾಲೂಕು ಕಚೇರಿಯ ಪೂರ್ವ ಭಾಗದ ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಮುಚ್ಚಿ ಗೋಡೆ ನಿರ್ಮಿಸಲಾಗಿದೆ. ಕೂಡಲೇ ಇದನ್ನು ತೆರವುಗೊಳಿಸಿ, ಸೂಕ್ತ ಕ್ರಮ ಜರಗಿಸಬೇಕೆಂದು ಕಾಂಗ್ರೆಸ್ ಪುರಸಭಾ ಸದಸ್ಯ ಭೈರಶೆಟ್ಟಿ ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಸಮಜಾಯಿಷಿ ನೀಡಿದ ಶಾಸಕರು ನಿಮಗೆ ಅಕ್ರಮವಾಗಿ ಗೋಡೆ ಕಟ್ಟಿದ್ದಾರೆ ಎಂದು ಹೇಳಿದವರು ಯಾರು? ಅಕ್ರಮ ಎಂದು ಯಾವ ಅರ್ಜಿಗಳು ಬಂದಿವೆ ಎಂದು ತಿಳಿಸಿ ಎಂದಾಗ ಪುರಸಭಾ ನಾಮನಿರ್ದೇಶಕ ಸದಸ್ಯ ಉಮೇಶ್ ಲಕ್ಕೇಗೌಡ ಸಾರ್ವಜನಿಕರ ಪರವಾಗಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಅರ್ಜಿ ನೀಡಿದ್ದೇವೆ. ಆದ್ದರಿಂದ ಇದನ್ನು ಪರಿಗಣಿಸಿ ಕೂಡಲೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪಟ್ಟಣದ ಎಸ್‌ಎಲ್‌ಎನ್ ವಾಲಿಬಾಲ್ ಯುವಕ ಸಂಘದ ಸದಸ್ಯರು ಪುರಸಭೆಗೆ ಅರ್ಜಿ ನೀಡಿ ಬಯಲು ರಂಗಮಂದಿರ ವಾಲಿಬಾಲ್ ಅಂಕಣಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಲು ವಿನಂತಿಸಿದ ವಿಚಾರಕ್ಕೆ ತಕ್ಷಣವೇ ಕ್ರಮವನ್ನು ಕೈಗೊಳ್ಳಲು ಸೂಚಿಸಿದರು.
ಸಂತೆ ಸುಂಕ ವಸೂಲಿಯನ್ನು ಪುರಸಭೆ ವತಿಯಿಂದ ರದ್ದುಗೊಳಿಸಲು ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೆ ಸುಂಕವನ್ನು ವಿಧಿಸುವಾಗ ರೈತರು, ಬೀದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಸೂಕ್ತವಾದ ಕ್ರಮವಹಿಸಲು ತಿಳಿಸಿದರು.
ಪುರಸಭೆ ವತಿಯಿಂದ ಈಗಾಗಲೇ ನಿರ್ಮಾಣವಾಗಿರುವ ಕವರ್ ದಕ್ ಬದಿಯಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣಗಳ ದುರಸ್ತಿ ಕಾಮಗಾರಿಗೆ ಸುಮಾರು ಎರಡು ಕೋಟಿ ರೂ. ಅಂದಾಜು ವೆಚ್ಚದಲ್ಲಿ ತಾಂತ್ರಿಕ ಮತ್ತು ಅರ್ಥಿಕ ಬಿಡ್ ಅನುಮೋದನೆಗೆ ಸಭೆ ಒಪ್ಪಿಗೆ ನೀಡಿತು.
ಪಟ್ಟಣದಾದ್ಯಂತ 23 ವಾರ್ಡಿನ ರಸ್ತೆಗಳು ಮಳೆಯಿಂದ ಹಾಳಾಗಿ ಗುಂಡಿ ಬಿದ್ದು ಹಾಳಾಗಿದ್ದು, ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಸರ್ಕಾರದ ಮೊರೆ ಹೋಗಲು ಬರುವ ಸದಸ್ಯರು ಒಪ್ಪಿಗೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯ ಪೂರ್ವ ಭಾಗದ ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳ ಮತ್ತು ಸರ್ಕಾರದ ನಿರ್ದೇಶನದ ಅನುಸಾರ ಕ್ರಮ ವಹಿಸಲು ಸೂಚಿಸಿದರು.
ಪುರಸಭೆ ಉಪಾಧ್ಯಕ್ಷೆ ಸಾವಿತ್ರಿ, ಮುಖ್ಯಾಧಿಕಾರಿ ಯು.ಎನ್.ಶಿವಶಂಕರ್, ಜಿ.ಕೆ.ಸುಧಾನಳಿನಿ, ಕೆ.ಶ್ರೀಧರ್, ಎ.ಜಗನ್ನಾಥ್, ಜ್ಯೋತಿ ಮಂಜುನಾಥ್, ಮಧು, ವಾಸಿಂ, ಟಿ.ಶಾಂತಿ, ಜವರೇಶ್, ನಾಗಮಣಿ, ತರಕಾರಿ ಮಂಜು, ನಾಮ ನಿರ್ದೇಶಿತ ಪುರಸಭೆ ಸದಸ್ಯರಾದ ಉಮೇಶ್ ಲಕ್ಕೇಗೌಡ, ಉದಯ್ ಕುಮಾರ್, ಸುನಿತಾ, ಪುರಸಭೆ ಅಧಿಕಾರಿಗಳಾದ ಪಂಕಜಾ, ರಮೇಶ್, ಸಿ.ಡಿ ನಾಗೇಂದ್ರ ಕುಮಾರ್, ರುಚಿ ದರ್ಶಿನಿ, ವಸಂತ್ ಕುಮಾರ್, ಪರಮೇಶ್ ಇತರರಿದ್ದರು.