

ವಿರಾಜಪೇಟೆ: ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಮಾಡಿ ವಾಹನ ಖರೀದಿಸಿದ್ದೇವೆ. ಆದರೆ, ನಮಗೆ ಸೂಕ್ತ ಬಾಡಿಗೆ ಸಿಗದೆ ಬದುಕು ಸಾಗಿಸಲು ದುಸ್ತರವಾಗಿದೆ ಎಂದು ಲಘು ವಾಹನ ಮಾಲೀಕರು, ಚಾಲಕರು ಅಸಹಾಯಕತೆ ವ್ಯಕ್ತಪಡಿಸಿದರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಶುಕ್ರವಾರ ಆಯೋಜಿಸಿದ್ದ ಕಾಯಕ ಸಮಾಜ ಸಂವಾದದಲ್ಲಿ ಲಘು ವಾಹನ ಮಾಲೀಕರು, ಚಾಲಕರು ತಮ್ಮ ಸಂಕಷ್ಟ ತೆರೆದಿಟ್ಟರು.
ಬಾಡಿಗೆ ವಾಹನ ಚಾಲಕರೆಂದರೆ ಜನರಲ್ಲಿ ತಾತ್ಸಾರ. ಜನ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ. ನಾವು ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸಿದರೂ ನಮ್ಮದೆ ಆದ ಒಂದು ಗುಂಪು ಎಂಬಂತಾಗಿದೆ. ನಮಗೆ ಆ ರೀತಿ ಆಗುತ್ತದೋ ಅಥವಾ ಸಮಾಜವೇ ನಮ್ಮನ್ನು ಆ ರೀತಿಯಾಗಿ ನೋಡುತ್ತಿದೆಯೋ ಗೊತ್ತಿಲ್ಲ. ಜೀವನ ನಿರ್ವಹಣೆಗೆ ಲಘು ವಾಹನ ತೆಗೆದುಕೊಂಡಿದ್ದೇವೆ. ಬಾಡಿಗೆ ಇಲ್ಲದೆ, ಮಾರಾಟ ಮಾಡಲು ಆಗದ ಪರಿಸ್ಥಿತಿ ಇದೆ ಎಂದು ಅಲವತ್ತುಕೊಂಡರು.
ಚಾಲಕರಲ್ಲಿ ಬಹುತೇಕರು ವಿದ್ಯಾವಂತರು. ನಿರುದ್ಯೋಗ ಸಮಸ್ಯೆಯಿಂದಾಗಿ ಜೀಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ವಾಹನ ನಿಲ್ಲಿಸಲು ನಿಲ್ದಾಣವಿಲ್ಲ. ಹಿಂದೆ ಪಿಡಬ್ಲುೃ ಕಚೇರಿ ಮುಂದೆ ನಿಲುಗಡೆಗೆ ಅವಕಾಶ ಇತ್ತು. ಸಾರ್ವಜನಿಕರಿಗೆ ಉಪಯೋಗ ಆಗಲೆಂದು ನಮ್ಮನ್ನು ಎತ್ತಂಗಡಿ ಮಾಡಿಸಿದರು. ಆ ಸ್ಥಳ ಈಗ ಬ್ಯಾಂಕ್, ಎಲ್‌ಐಸಿ, ಖಾಸಗಿ ಹಣಕಾಸು ಸಂಸ್ಥೆ ಸಿಬ್ಬಂದಿ ನಿಲ್ದಾಣವಾಗಿದೆ ಎಂದು ದೂರಿದರು.
ಕರೊನಾ ಸಂದರ್ಭದಲ್ಲಿ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವ ಪರಿಸ್ಥಿತಿ ಎದುರಾಗಿತ್ತು. ಕೆಲವು ಸಂಘ, ಸಂಸ್ಥೆಗಳು ಸ್ಪಲ್ಪ ಮಟ್ಟಿಗೆ ಆರ್ಥಿಕ ನೆರವಿನೊಂದಿಗೆ ಆಹಾರ ಕಿಟ್ ನೀಡಿದವು. ಆದರೆ, ಸರ್ಕಾರದಿಂದ ಯಾವುದೇ ನೆರವು ಬಂದಿಲ್ಲ. ನಂತರದ ದಿನಗಳಲ್ಲಿ ನಮ್ಮ ಪರಿಸ್ಥಿತಿ ಸುಧಾರಿಸಲಿಲ್ಲ. ಬಹುತೇಕ ತೋಟದ ಮಾಲೀಕರಲ್ಲಿ ತೊಟ್ಟಿ, ಪಿಕ್‌ಅಪ್ ಜೀಪು ಇರುವುದರಿಂದ ನಮ್ಮನ್ನು ಬಾಡಿಗೆಗೆ ಕರೆಯೊದು ಕಡಿಮೆ.
ಗಡಿ ಭಾಗವಾದ ಮಾಕುಟ್ಟ, ಕುಟ್ಟದಲ್ಲಿ ಆರ್‌ಟಿಒ ಚೆಕ್‌ಪೋಸ್ಟ್ ಇಲ್ಲದ ಕಾರಣ ಕೇರಳದ ಬಾಡಿಗೆ ವಾಹನಗಳು ಯಾವುದೇ ನಿರ್ಬಂಧ ಇಲ್ಲದೆ ಜಿಲ್ಲೆಯೊಳಗೆ ಪ್ರವೇಶಿಸುತ್ತಿವೆ. ಆರ್‌ಟಿಒ ಅಧಿಕಾರಿಗಳು ಇದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಾವೇನಾದರು ಹೆಚ್ಚಿಗೆ ಲೋಡ್ ಹಾಕಿಕೊಂಡರೆ ನಮ್ಮಿಂದ ದಂಡ ಕಟ್ಟಿಸಿಕೊಳ್ಳುತ್ತಾರೆ. ನಾವು ಕೇರಳಕ್ಕೆ ಹೋಗಬೇಕಾದರೆ ತಾತ್ಕಾಲಿಕ ಪರವಾನಿಗೆ ತೆಗೆದುಕೊಂಡು ಹೋಗಬೇಕು. ನಮ್ಮಲ್ಲಿ ಆರ್‌ಟಿಒ ಚೆಕ್‌ಪೋಸ್ಟ್ ಇಲ್ಲದಿರುವುದರಿಂದ ನಾವು ಕೇರಳಲ್ಲಿ ತೆರಿಗೆ ಕಟ್ಟಬೇಕು. ನಮ್ಮ ಹಣ ಅವರ ಬೊಕ್ಕಸಕ್ಕೆ ಹೋಗುತ್ತಿದೆ. ಇದು ನಮ್ಮ ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ. ಒಟ್ಟಿನಲ್ಲಿ ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೀವನ ನಿರ್ವಹಣೆ ಕಷ್ಟ ಸಾಧ್ಯ
ಜೀಪು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ತೈಲಬೆಲೆ ಏರಿಕೆ, ಬಿಡಿ ಭಾಗಗಳ ದರ ಹೆಚ್ಚಳ ಹೊರೆಯಾಗುತ್ತಿದೆ. ಶೇ.90 ರಷ್ಟು ವಾಹನಗಳಿಗೆ ಸಾಲ ಇದೆ. ವಾಹನ ಬಾಡಿಗೆಗೆ ಓಡಿಸಿ, ಜೀವನ ನಿರ್ವಹಣೆ ಕಷ್ಟಸಾಧ್ಯ. ತಾತ್ಕಾಲಿಕ ಪರವಾನಿಗೆ ತೆಗೆದುಕೊಂಡು ಹೊರ ರಾಜ್ಯಗಳಿಗೆ ಹೋದರೆ ನಮಗೆ ಬಾಡಿಗೆ ಬರುವುದಿಲ್ಲ. ಸರ್ಕಾರ ಲಘು ವಾಹನ ಚಾಲಕರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಿಕೊಟ್ಟರೆ ಉತ್ತಮ.
ಎ.ಪಿ.ದಿನೇಶ್, ಅಧ್ಯಕ್ಷ, ಲಘು ವಾಹನ ಚಾಲಕರು ಮತ್ತು ಮಾಲೀಕರ ಸಂಘ, ವಿರಾಜಪೇಟೆ.
ಸಾಲ ಮಾಡಿ ವಾಹನ ಖರೀದಿ
ಬಾಡಿಗೆ ವಾಹನ ಓಡಿಸುವವರು ಸ್ಥಿತಿವಂತರೇನಲ್ಲ. ಲಕ್ಷಾಂತರ ರೂ. ಸಾಲ ಮಾಡಿ ವಾಹನ ತೆಗೆದುಕೊಂಡು ಬಾಡಿಗೆಗೆ ಓಡಿಸುತ್ತಿದ್ದೇವೆ. ಬಾಡಿಗೆ ಇಲ್ಲದೆ ಖಾಲಿ ಕೈಯಲ್ಲಿ ಮನೆಗೆ ತೆರಳಿದ ದಿನಗಳು ಇವೆ. ವಾಹನ ಮಾರಾಟ ಮಾಡಲು ಆಗದೆ, ಸಾಲ ಮರುಪಾವತಿ ಮಾಡಲು ಆಗದೆ ಅಸಹಾಯಕ ಪರಿಸ್ಥಿತಿಯಲ್ಲಿದ್ದೇವೆ.
ಟಿ.ಎನ್.ಸುದರ್ಶನ್, ಬಾಡಿಗೆ ವಾಹನ ಚಾಲಕ, ವಿರಾಜಪೇಟೆ
ಸ್ಥಳೀಯ ಬಾಡಿಗೆ ವಾಹನಗಳಿಗೆ ತೊಂದರೆ
ವಾರದಲ್ಲಿ ಒಂದೆರಡು ದಿನ ಬಾಡಿಗೆ ಸಿಗುತ್ತದೆ. ಕೇರಳ ನೋಂದಣಿ ಇರುವ ತೊಟ್ಟಿ ಜೀಪನ್ನು ತಂದು 3 ತಿಂಗಳ ಅವಧಿಗೆ ವ್ಯವಹಾರ ನಡೆಸುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಬಾಡಿಗೆ ವಾಹನಗಳಿಗೆ ತೊಂದರೆ ಆಗುತ್ತಿದೆ. ನಾವು ಕೇರಳಕ್ಕೆ ಬಾಡಿಗೆ ತೆರಳಿದರೆ ಅಲ್ಲಿ ನಮ್ಮನ್ನು ಕನಿಷ್ಠವಾಗಿ ನೋಡುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾರು ಬೇಕಾದರೂ ವ್ಯವಹಾರ ನಡೆಸಬಹುದಾಗಿದೆ.
ಬಿ.ಪಿ. ರಮೇಶ್, ಬಾಡಿಗೆ ವಾಹನ ಚಾಲಕ, ವಿರಾಜಪೇಟೆ
ನಿಲ್ದಾಣ ಇಲ್ಲದೆ ರಸ್ತೆ ಬದಿ ನಿಲ್ಲಿಸಬೇಕಾಗಿದೆ
ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಲಕ್ಷಾಂತರ ರೂ. ಸಾಲ ಪಡೆದು ವಾಹನ ಖರೀದಿಸಿ, ಬಾಡಿಗೆ ಇಲ್ಲದ ಕಾರಣ ತಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ದುಡಿದ ಹಣ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಕಟ್ಟಲು ಸಾಧ್ಯವಿಲ್ಲ. ನಮ್ಮ ವಾಹನವನ್ನು ಯಾವಾಗ ಎಳೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ವಾಹನ ನಿಲ್ಲಿಸಲು ನಿಲ್ದಾಣ ಇಲ್ಲದ್ದರಿಂದ ರಸ್ತೆ ಬದಿ ನಿಲ್ಲಿಸಬೇಕಾಗಿದೆ.
ಎ.ಬಿ.ಈರಪ್ಪ, ಬಾಡಿಗೆ ವಾಹನ ಚಾಲಕ, ವಿರಾಜಪೇಟೆ.