ಬಾಡಿ ರೀಚಾರ್ಜ್ ಗೆ ಬೇಕು ಯೋಗ

Yoga
Published on

ಬೀದರ್: ನಿತ್ಯವೂ ಮೊಬೈಲ್ ಗೆ ರೀರ್ಚಾಜ್ ಮಾಡಿದಾಗಲೇ ಅದು ಬಳಕೆಗೆ ಬರುತ್ತದೆ. ರೀಚಾಜ್೯ ಮಾಡದಿದ್ದರೆ ಎಷ್ಟೇ ಮೌಲ್ಯದ ಮೊಬೈಲ್ ಇದ್ದರೂ ನಿಷ್ಪ್ರಯೋಜಕ. ಅದೇ ರೀತಿ ದೇಹ ಸದೃಢವಾಗಿದ್ದು, ಸಶಕ್ತ ಹಾಗೂ ಸಮರ್ಥವಾಗಿ ಕೆಲಸ ಮಾಡಲು ನಿತ್ಯ ಯೋಗದ ಮೂಲಕ ರೀಚಾಜ್೯ ಮಾಡುವುದು ಅಗತ್ಯ ಎಂದು ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಪ್ರತಿಪಾದಿಸಿದರು.

ನಗರದ ವಿದ್ಯಾನಗರ ಕಾಲನಿಯ ರಾಮ ಮಂದಿರ ಆವರಣದಲ್ಲಿ ಜೈಶ್ರೀರಾಮ ಚಾರಿಟೇಬಲ್ ಎಜುಕೇಷನ್ ಸೊಸೈಟಿ ವತಿಯಿಂದ ಸೋಮವಾರ ಆರಂಭಿಸಿರುವ ಒಂದು ವಾರದ ಉಚಿತ ಯೋಗ ಶಿಬಿರದಲ್ಲಿ ಮಾತನಾಡಿ, ಯೋಗವಿಲ್ಲದ ಬದುಕು ಸಂಕಷ್ಟಕ್ಕೀಡಾಗಲಿದೆ. ನಿತ್ಯವೂ ಯೋಗ ಮಾಡಿದಾಗ ಮಾತ್ರ ಆರೋಗ್ಯ ಸಂಪತ್ತು ನಮ್ಮದಾಗಿಸಿಕೊಂಡು ಏನಾದರೂ ಸಾಧನೆ ಮಾಡಬಹುದು ಎಂದರು.

ಹಿರಿಯ ಪತ್ರಕರ್ತ ಸ.ದಾ.ಜೋಶಿ ಉದ್ಘಾಟಿಸಿ ಮಾತನಾಡಿ, ಇಂದಿನ ಅಧುನಿಕ ಶೈಲಿ ಜೀವನ ಹಲವು ಮಾರಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಎಲ್ಲರೂ ನಿತ್ಯ ಒಂದು ಗಂಟೆ ಯೋಗಕ್ಕೆ ಸಮಯ ಮೀಸಲಿಟ್ಟರೆ ನಿರೋಗಿ ಜೀವನ ನಡೆಸಲು ಸಾಧ್ಯ. ಮನೆಯ ಸದಸ್ಯರೆಲ್ಲ ಯೋಗ ಮಾಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು. ಬರುವ ದಿನಗಳಲ್ಲಿ ಕರೊನಾಗಿಂತ ಭೀಕರ ವೈರಸ್ ಕಾಡಬಹುದು. ಹೀಗಾಗಿ ಮುಂದಿನ ಸವಾಲು ಎದುರಿಸಲು ಸನ್ನದ್ಧರಾಗಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ದೈಹಿಕ ಸದೃಢತೆ ಸಾಧಿಸಬೇಕಿದೆ ಎಂದರು.

ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶ್ರೀಕಾಂತ ಪಾಟೀಲ್ ನಿರೂಪಣೆ ಮಾಡಿದರು. ಪ್ರಭು ಆಲೂರು ಸ್ವಾಗತಿಸಿದರು. ಒಂದು ವಾರ ಯೋಗೇಂದ್ರ ಅವರು ನಿತ್ಯ ಬೆಳಗ್ಗೆ 6ರಿಂದ 7ರವರೆಗೆ ಯೋಗ ಶಿಬಿರ ನಡೆಸಿಕೊಡಲಿದ್ದಾರೆ.

ದೇಹ, ಬುದ್ದಿ ಹಾಗೂ ಮನಸ್ಸು ಒಂದಾಗಿಸುವ ಅದ್ಭುತ ಶಕ್ತಿ ಯೋಗಕ್ಕಿದೆ. ಬಾಬಾ ರಾಮದೇವ ಅವರ ಕೃಪೆಯಿಂದ ಇಂದು ದೇಶ, ವಿದೇಶದ ಕೋಟ್ಯಂತರ ಜನ ಯೋಗದ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿದ್ದಾರೆ. ಸಶಕ್ತ, ಸಮೃದ್ಧ ಭಾರತದ ಕನಸು ಯೋಗದ ಮೂಲಕ ಸಾಕಾರಗೊಳಿಸಬಹುದು.| ಯೋಗೇಂದ್ರ ಯದಲಾಪುರೆ, ಯೋಗ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net