ಬಾಚಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ

HUN-NOV-4-2(MLA INAGURATION ZP OFF) (1)
Published on


ಶಾಸಕ ಎಚ್.ಪಿ.ಮಂಜುನಾಥ್ ಹರ್ಷ


ಹುಣಸೂರು: ತಾಲೂಕಿನ ಬಾಚಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಹಳೆಉಂಡುವಾಡಿ ಕಾವೇರಿ ಕುಡಿಯುವ ನೀರಿನ ಯೋಜನೆ)ಗೆ ಸರ್ಕಾರದ ಅನುಮೋದನೆ ದೊರಕಿದ್ದು, ಒಂದು ವರ್ಷದಲ್ಲಿ ತಾಲೂಕಿನಾದ್ಯಂತ ಕಾವೇರಿ ನೀರು ಗ್ರಾಮೀಣ ಜನತೆಗೆ ಕುಡಿಯಲು ಸಮೃದ್ಧವಾಗಿ ಸಿಗಲಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರು ಪೂರೈಕೆ ವಿಭಾಗದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ ದರು. 6 ವರ್ಷಗಳ ಕನಸಿನ ಯೋಜನೆ ಇದಾಗಿದ್ದು, ಇದೀಗ ಸಾಕಾರಗೊಳ್ಳುತ್ತಿದೆ. ಕಾವೇರಿ ಹಿನ್ನೀರಿನ ಹಳೆ ಉಂಡುವಾಡಿ ಮೂಲಕ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ದೊರಕಲಿದೆ. 280 ಕೋಟಿ ರೂ.ಗಳ ಬಂಪರ್ ಯೋಜನೆಗೆ ಮುಖ್ಯಮಂತ್ರಿಯಾದಿಯಾಗಿ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಸುತ್ತೇನೆ. ಡಿ.2023ರೊಳಗೆ ಯೋಜನೆ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.

ಜೆಜೆಎಂಗೆ 210 ಕೋಟಿ ರೂ.: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲ್‌ಜೀವನ್ ಮಿಷನ್ ಯೋಜನೆಯ 3ನೇ ಹಂತದಲ್ಲಿ 211 ಗ್ರಾಮಗಳಿಗೆ ನೀರಿನ ಪೂರೈಕೆ ಮಾಡಲು ಅಗತ್ಯ ಕಾಮಗಾರಿ ಕೈಗೊಳ್ಳಲು 210 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಜೆಜೆಎಂ ಯೋಜನೆಯ 2ನೇ ಹಂತ(2018-19ರ ಅವಧಿ)ದ ವೇಳೆ ತಾಲೂಕಿನ ಒಂದು ಗ್ರಾಮವೂ ಒಳಪಡಲಿಲ್ಲ. ಆ ಸಂದರ್ಭದಲ್ಲಿ ತಾವು ಅಧಿಕಾರದಲ್ಲಿ ಇರಲಿಲ್ಲ. ಇದೀಗ 3ನೇ ಹಂತದ ಯೋಜನೆಗೆ ಅನುಮತಿ ದೊರಕಿದ್ದು, ನಾಲ್ಕನೇ ಹಂತಕ್ಕಾಗಿ 60 ಗ್ರಾಮಗ ಳನ್ನು ಸೇರಿಸಲಾಗಿದೆ. ನ.14ರ ನಂತರ ಸಂಸದ ಪ್ರತಾಪ್‌ಸಿಂಹ ಜತೆಗೂಡಿ ಸಾಂಕೇತಿಕವಾಗಿ 8 ಗ್ರಾಮಗಳಲ್ಲಿ ಯೋಜನೆ ಜಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಜೆಜೆಎಂ ಯೋಜನೆಗೆ ಪ್ರಸ್ತುತ ಹಾಲಿ ಇರುವ ನೀರಿನ ಸಂಪನ್ಮೂಲಗಳನ್ನೇ ಬಳಸಿಕೊಳ್ಳಲಾಗುವುದು. ಬಾಚಳ್ಳಿ ಬಹುಗ್ರಾಮ ಯೋಜನೆ ಜಾರಿಗೊಂಡ ನಂತರ ಕಾವೇರಿ ನೀರಿನ ಸಂಪರ್ಕ ನೀಡುವಲ್ಲಿ ಸೂಕ್ತ ಅವಕಾಶಗಳನ್ನು ಮಾಡಿಕೊಳ್ಳಲಾಗಿದೆ. ಜೆಜೆಎಂ ಯೋಜನೆಯಡಿ ಸಿಮೆಂಟ್ ರಸ್ತೆಯಲ್ಲೂ ಪೈಪ್‌ಲೈನ್ ಹಾಕಿ ನಂತರ ರಸ್ತೆಯನ್ನು ದುರಸ್ತಿಗೊಳಿಸಲು ಆರ್ಥಿಕ ಅನುದಾನದೊಂದಿಗೆ ಅವಕಾಶ ನೀಡಿರು ವುದು ಸ್ವಾಗತಾರ್ಹ ಸಂಗತಿ. ಜೆಜೆಎಂ ಮತ್ತು ಬಾಚಳ್ಳಿ ಯೋಜನೆ ಜಾರಿಯಲ್ಲಿ ಜಿ.ಪಂ.ಕುಡಿಯುವ ನೀರು ವಿಭಾಗದ ಈ ಹಿಂದಿನ ಎಇಇಗಳಾದ ಮಹೇಶ್ ಮತ್ತು ನಾಗರಾಜ್ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಪಂ.ಎಇಇ ನರಸಿಂಹಯ್ಯ, ಕುಡಿಯುವ ನೀರು ವಿಭಾಗದ ಎಇಇ ಖಲೀಂ, ಜೆಇಗಳು ಹಾಜರಿದ್ದರು.

ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಾರದೆಂಬ ತಮ್ಮ ಸತತ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದೆ. ಬಾಚಳ್ಳಿ ಬಹುಗ್ರಾಮಗಳ ಯೋಜನೆ ಜಾರಿಗೊಂಡಲ್ಲಿ ತಾಲೂಕಿನಾದ್ಯಂತ ಜನತೆಗೆ ಶುದ್ಧ ಕುಡಿಯುವ ನೀರು ಸಿಗಲಿದೆ. ಗ್ರಾಮೀಣ ಭಾಗಗಳಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ನೀರು ಬಿಡುವ ವ್ಯವಸ್ಥೆ ಇರುವುದಿಲ್ಲ. ನನಗೆ ಇದಕ್ಕಿಂತ ಸಂತಸದ ವಿಷಯ ಇನ್ನೊಂದಿಲ್ಲ
ಎಚ್.ಪಿ.ಮಂಜುನಾಥ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net