

ಹುಬ್ಬಳ್ಳಿ: ಲಾಕ್ಡೌನ್ ವೇಳೆ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ಅ.15ರಿಂದ ತೆರೆಯಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದರೂ ನಗರದಲ್ಲಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳು ಗುರುವಾರ ಬಾಗಿಲು ತೆರೆಯಲಿಲ್ಲ.
ಶೇ.50ರಷ್ಟು ಟಿಕೆಟ್ ಕೊಟ್ಟು ಸಿನಿಮಾ ಪ್ರದರ್ಶನ ಆರಂಭಿಸಬಹುದು ಎಂದು ಸರ್ಕಾರ ಆದೇಶಿಸಿದೆ. ಆದರೆ, ಚಿತ್ರಮಂದಿರಗಳ ಮಾಲೀಕರು ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಶೇ.50ರಷ್ಟು ಪ್ರೇಕ್ಷಕರು ಬಾರದಿದ್ದಲ್ಲಿ ನಷ್ಟ ಉಂಟಾಗುತ್ತದೆ ಎಂಬ ಚಿಂತೆ ಮಾಲೀಕರದ್ದಾಗಿದೆ.
ಸತತ 7 ತಿಂಗಳು ಸಿನಿಮಾ ಮಂದಿರಗಳು ಬಂದ್ ಆಗಿದ್ದರಿಂದ ಬಹುತೇಕ ಸಿಬ್ಬಂದಿಗೆ ರಜೆ ಘೊಷಿಸಲಾಗಿತ್ತು. ಮತ್ತೆ ಸಿಬ್ಬಂದಿ ಕರೆಸಿ, ಪ್ರದರ್ಶನ ಆರಂಭಿಸಲು ಕಾಲಾವಕಾಶ ಬೇಕಿದೆ. ಹಾಗಾಗಿ, ನಗರದ ಸುಧಾ, ಅಪ್ಸರಾ, ಶೃಂಗಾರ, ರೂಪಂ, ಸುಜಾತಾ, ಸಂಜೋತಾ ಮತ್ತಿತರ ಚಿತ್ರಮಂದಿರಗಳು ಸೇರಿ ಮಲ್ಟಿಪ್ಲೆಕ್ಸ್ಗಳು ಬಾಗಿಲು ಮುಚ್ಚಿದ್ದವು. ಇದರಿಂದ ಕೆಲ ಪ್ರೇಕ್ಷಕರು ನಿರಾಸೆಗೊಂಡರು. ಕೊಯಿನ್ ರಸ್ತೆಯ ಲಕ್ಷ್ಮಿ ಮಾಲ್ನ ಪಿವಿಆರ್ ಚಿತ್ರಮಂದಿರ ವಾರದೊಳಗೆ ಆರಂಭವಾಗುವ ಸಾಧ್ಯತೆ ಇದೆ ಎಂದು ಪಿವಿಆರ್ ಮ್ಯಾನೇಜರ್ ರಾಜು ತಿಳಿಸಿದರು. ಗೋಕುಲ ರಸ್ತೆ ಅರ್ಬನ್ ಓಯಸಿಸ್ ಮಾಲ್ನ ಸಿನಿಪೊಲೀಸ್ ಮಲ್ಟಿಪ್ಲೆಕ್ಸ್ ಚಿತ್ರಮಮಂದಿರ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ. ಆದರೆ, ಪ್ರದರ್ಶನ ಆರಂಭಿಸುವ ದಿನಾಂಕ ನಿರ್ಧಾರವಾಗಿಲ್ಲ ಎಂದು ಮ್ಯಾನೇಜರ್ ಕುನಾಲ್ ಶುಕ್ಲ ‘ವಿಜಯವಾಣಿ’ಗೆ ತಿಳಿಸಿದರು. ಧಾರವಾಡದಲ್ಲೂ ಯಾವ ಚಿತ್ರಮಂದಿರಗಳು ಗುರುವಾರ ತೆರೆಯಲಿಲ್ಲ. ನಗರದ ಶ್ರೀನಿವಾಸ, ವಿಜಯಾ, ಸಂಗಮ, ಪದ್ಮಾ ಚಿತ್ರಮಂದಿರಗಳು ಬಾಗಿಲು ಹಾಕಿದ್ದವು. ಚಿತ್ರಮಂದಿರ ಆರಂಭವಾಗುವ ಸುದ್ದಿ ತಿಳಿದು ಅತ್ತ ತೆರಳಿದ್ದ ಜನ ಬೇಜಾರಿನಿಂದ ವಾಪಸ್ ತೆರಳಿದರು.