ಬಾಗಿಲು ತೆರೆದ ಮಠ-ಮಂದಿರಗಳು

0805Klb13
Published on

ಕಲಬುರಗಿ: ಸರ್ಕಾರದ ಆದೇಶದಂತೆ ನಗರ ಸೇರಿ ಜಿಲ್ಲಾದ್ಯಂತ ಮಠ-ಮಂದಿರ, ಮಸೀದಿ, ಚರ್ಚ್​ಗಳು ಸೋಮವಾರದಿಂದ ಬಾಗಿಲು ತೆರೆದಿದ್ದು, ಎರಡೂವರೆ ತಿಂಗಳ ನಂತರ ದರ್ಶನ ಪಡೆದು ಭಕ್ತರು ಪುನೀತರಾದರು.
ಕರೊನಾತಂಕದ ನಡುವೆಯೂ ಭಕ್ತರು ಮಾಸ್ಕ್ ಧರಿಸಿ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತ ದೇವಸ್ಥಾನ, ಮಠ, ಮಸೀದಿ, ಚರ್ಚ್​ ಹಾಗೂ ಗುರುದ್ವಾರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಶರಣಬಸವೇಶ್ವರ ಮಂದಿರದಲ್ಲಿ ಶರಣನ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಪರಸ್ಪರ ಅಂತರ ಕಾಪಾಡುವ ಮೂಲಕ ಭಕ್ತರು ಮಾಸ್ಕ್ ಹಾಕಿಕೊಂಡು ಸರದಿ ನಿಂತು ದರ್ಶನ ಪಡೆದರು. ಬೆಳಗ್ಗೆ 5ರಿಂದ 10 ಹಾಗೂ ಸಂಜೆ 5ರಿಂದ ರಾತ್ರಿ 8ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂದಿರ ಆವರಣದಲ್ಲಿ ದೇವಸ್ಥಾನ ಸಿಬ್ಬಂದಿ ಸುರಕ್ಷಿತ ಕ್ರಮಗಳೊಂದಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಜೇವರ್ಗಿ ಕಾಲನಿ, ಬಿದ್ದಾಪುರ ಕಾಲನಿ ರಾಯರ ಮಠ, ನ್ಯೂ ರಾಘವೇಂದ್ರ ಕಾಲನಿ ಶ್ರೀ ವೆಂಕಟೇಶ್ವರ ದೇವಸ್ಥಾನ, ಕೋರಂಟಿ ಹನುಮಾನ ಮಂದಿರ, ಜೇವರ್ಗಿ ರಸ್ತೆಯ ರಾಮ ಮಂದಿರ, ಆಳಂದ ರಸ್ತೆ ವೈಷ್ಣೋದೇವಿ ಮಂದಿರ, ಸೇಡಂ ರಸ್ತೆಯ ಅಮೃತ ಸರೋವರ, ಕಾಳನೂರಿನ ಶ್ರೀ ಲಕ್ಷ್ಮೀ ನಾರಾಯಣ ಮಂದಿರಗಳಿಗೆ ಭಕ್ತರು ತೆರಳಿ ದರ್ಶನ ಪಡೆದುಕೊಂಡರು.

ಸದ್ಯಕ್ಕಿಲ್ಲ ಗಾಣಗಾಪುರ ದತ್ತ, ಭಾಗ್ಯವಂತಿ ದರ್ಶನ
ಕರೊನಾ ಹಾವಳಿಯಿಂದ ಬಂದ್ ಆಗಿದ್ದ ದೇವಾಲಯಗಳು ಸೋಮವಾರ ತನ್ನ ಬಾಗಿಲು ತೆರೆದಿವೆ. ಆದರೆ ದೇವಲ ಗಾಣಗಾಪುರದ ದತ್ತಾತ್ರೇಯ ಮತ್ತು ಘತ್ತರಗಿ ಭಾಗ್ಯವಂತಿ ದೇವಿ ದರ್ಶನ ಸದ್ಯಕ್ಕೆ ಭಕ್ತರಿಗೆ ಲಭಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಈ ದೇವಾಲಯಗಳಿಗೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆ ರಾಜ್ಯಗಳಲ್ಲಿ ಕರೊನಾ ಅಬ್ಬರ ಜೋರಾಗಿದ್ದರಿಂದ ಜಿಲ್ಲೆ ಜನ ಮತ್ತು ದೇಗುಲ ಸಿಬ್ಬಂದಿ ಸುರಕ್ಷತೆಗಾಗಿ 22ರವರೆಗೆ ದರ್ಶನಕ್ಕೆ ನಿರ್ಬಂಧ ಹೇರಿ 144 ಕಲಮಿನನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.
ಈ ದೇವಾಲಯಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿರುವುದು ಮತ್ತು ಎಲ್ಲರ ಅರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿದ್ದರಿಂದ ಸದ್ಯಕ್ಕೆ ಭಕ್ತರಿಗೆ ದರ್ಶನ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net