ಬಾಗಿನ ಸಮರ್ಪಣೆ ಹಾಗೂ ಮಹಿಳಾ ಜಾಗೃತಿ ಸಮಾರಂಭ

ಬಾಗಿನ ಸಮರ್ಪಣೆ ಹಾಗೂ ಮಹಿಳಾ ಜಾಗೃತಿ ಸಮಾರಂಭ
Published on

ಅರಸೀಕೆರೆ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನದ ಮಹಾಪೂರವನ್ನೇ ಹರಿಸಿವೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಸಮರ್ಥಿಸಿಕೊಂಡರು.

ತಾಲೂಕಿನ ಬಾಳೆನಳ್ಳಿ ಬಾವಿ ಗೇಟ್ ಬಳಿ ಭಾನುವಾರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಾಗಿನ ಸಮರ್ಪಣೆ ಹಾಗೂ ಮಡಿಲು ಅಕ್ಕಿ ತುಂಬು ಕಾರ್ಯಕ್ರಮ ಹಾಗೂ ಮಹಿಳಾ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 35 ಗ್ರಾಮ ಪಂಚಾಯಿತಿಗಳಿಗೆ ಅಂದಾಜು 150 ಕೋಟಿ ರೂ. ಅನುದಾನ ಒದಗಿಸಿವೆ. ರಸ್ತೆ,ಚರಂಡಿ, ಶೌಚಾಲಯ, ದನದ ಕೊಟ್ಟಿಗೆ ನಿರ್ಮಾಣ, ಕುಡಿಯುವ ನೀರಿನ ಘಟಕ ತೆರೆಯುವುದು ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಉಭಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ನಡೆಸಿವೆ. ಅನುದಾನ ತರುವ ನಿಟ್ಟಿನಲ್ಲಿ ಕೇಂದ್ರದ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.ಆದರೆ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳುವ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ವಾಗ್ದಾಳಿ;

ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು ಅಗತ್ಯಕ್ಕೆ ತಕ್ಕಂತೆ ಅನುದಾನ ನೀಡಲಾಗುತ್ತಿದೆ. ಎತ್ತಿನಹೊಳೆ, ಮನೆ ಮನೆಗೆ ಗಂಗೆ ಯೋಜನೆ ಸೇರಿ ಕಳೆದ 15 ವರ್ಷಗಳಲ್ಲಿ ಸಹಸ್ರಾರು ಕೋಟಿ ರೂ.ಅನುದಾನ ಹರಿದು ಬಂದಿದೆ. ಕ್ಷೇತ್ರದ ಶಾಸಕರು ಹಾರೆ, ಗುದ್ದಲಿ ಹಿಡಿದು ಕಾಂಕ್ರೀಟ್ ರಸ್ತೆ ಹಾಕಿಸಿದ್ದನ್ನೇ ಅಭಿವೃದ್ಧಿ ಎಂದು ಹೇಳಲು ಹೊರಟಿದ್ದಾರೆ. 20 ವರ್ಷಗಳ ಹಿಂದೆ ಕೇವಲ 17 ತೆಂಗಿನ ಮರ ಹೊಂದಿದ್ದವರು ನೂರಾರು ಕೋಟಿ ರೂ.ಆಸ್ತಿ ಮಾಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಜಾತಿ, ಉಪಜಾತಿಗಳನ್ನು ಎತ್ತಿಕಟ್ಟುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿರುವ ವ್ಯಕ್ತಿಯನ್ನು ಮನೆಗೆ ಕಳುಹಿಸುವ ಕಾಲ ಹತ್ತಿರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಗಿನ್ನಿಸ್ ದಾಖಲೆ:

ಅಧಿಕಾರ ಹಂಚಿಕೆಯ ನೆಪವಿಟ್ಟು ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ, ಎಪಿಎಂಸಿ ಸೇರಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನು ಆರು ತಿಂಗಳಿಗೊಮ್ಮೆ ಬದಲಿಸುವ ಮೂಲಕ ಶಾಸಕ ಕೆ.ಎಂ.ಶಿವಲಿಂಗೇಗೌಡ ಗಿನ್ನಿಸ್ ದಾಖಲೆ ಸೃಷ್ಟಿಸಲು ಹೊರಟಿದ್ದಾರೆ. ಶಾಸನಸಭೆ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿರುವವರು ಮತ್ತೊಂದು ಅವಧಿಗೆ ಅವಕಾಶ ಕೇಳಲು ಹೊರಟಿರುವುದು ಯಾವ ನ್ಯಾಯ ನೀವುಗಳೇ ಹೇಳಬೇಕು ಎಂದು ಮಾತಿನ ಚಾಟಿ ಬೀಸಿದರು.

ಪರಿಚಯಿಸಿ:

ಸರ್ಕಾರಿ ಉದ್ಯೋಗಗಳಿಗೆ ತಾಲೂಕಿನಿಂದ ಹೆಚ್ಚು ಯುವಕ,ಯುವತಿಯರು ಸೇರಬೇಕು ಎನ್ನುವ ಸಂಕಲ್ಪ ನನ್ನದಾಗಿದೆ. ತಾಯಂದಿರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜತೆಗೆ ಜಿಲ್ಲಾ, ತಾಲೂಕು ಕಚೇರಿಗಳಿಗೆ ಮಕ್ಕಳನ್ನು ಕರೆದೊಯ್ದು ಸೇವೆಯ ಮಹತ್ವ ಪರಿಚಯಿಸಬೇಕು.ಜತೆಗೆ ಸಮಸ್ಯೆ, ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು.ತಾಪಂ ಮಾಜಿ ಸದಸ್ಯ, ಭೋಜಾನಾಯ್ಕ ಬಿಜೆಪಿ ಗ್ರಾಮಾಂತರ ಮಂಡಲಾಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ನಗರಾಧ್ಯಕ್ಷ ಪುರುಷೋತ್ತಮ್, ಮುಖಂಡರಾದ ವೈ.ಕೆ.ದೇವರಾಜ್,ಕೆ.ವಿ.ಎನ್.ಶಿವು, ಮಂಜುನಾಥ್,ಉಮೇಶ್ ಭೋವಿ ಇನ್ನಿತರರು ಮಾತನಾಡಿದರು.ಮುಖಂಡರಾದ ಮಹೇಂದ್ರ ಕುಮಾರ್, ವಕೀಲ ಗಿರೀಶ್, ಚಂದ್ರಣ್ಣ, ಲೋಕೇಶ್, ಮಾಜಿ ಸೈನಿಕ ನವೀನ್ ಕುಮಾರ್, ಬಾಳೆನಹಳ್ಳಿ ಸಿದ್ದಪ್ಪ ಸೇರಿ ಹಲವರು ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net