

ವಿರಾಜಪೇಟೆ: ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ಕುಕ್ಲೂರು ಜಂಕ್ಷನ್ ಕೊಡವ ಸಮಾಜ ತಿರುವಿನ ಬಳಿ 66 ಕೆ.ವಿ. ತಂತಿ ಅಳವಡಿಸಿರುವ ವಿದ್ಯುತ್ ಕಂಬ ರಸ್ತೆಬದಿ ವಾಲಿಕೊಂಡಿದ್ದು, ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸಬಹುದಾಗಿದ್ದು, ಸೆಸ್ಕ್ ಸಿಬ್ಬಂದಿ ಎಚ್ಚೆತ್ತು ಕೂಡಲೇ ತೆರವುಗೊಳಿಸಿ ಹೊಸತನ್ನು ಅಳವಡಿಸುವಂತೆ ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ ಕುಯಿಮಂಡ ಕಿರಣ್ ಆಗ್ರಹಿಸಿದ್ದಾರೆ.
ಪತ್ರಿಕೆಗೆ ಈ ಬಗ್ಗೆ ಮಾಹಿತಿ ನೀಡಿರುವ ಅವರು, ವಿರಾಜಪೇಟೆಯ ಮಗ್ಗುಲ ವಿದ್ಯುತ್ ಪ್ರಸರಣ ಘಟಕದಿಂದ ಹಾದು ಹೋಗುತ್ತಿರುವ ವಿದ್ಯುತ್ ತಂತಿ ಕುಕ್ಲೂರು ಜಂಕ್ಷನ್ ಕೊಡವ ಸಮಾಜ ತಿರುವಿನಲ್ಲಿದೆ. ಈ ಕಂಬದಿಂದ ಹಲವಾರು ಕಡೆಗಳಿಗೆ ವಿದ್ಯುತ್ ನೀಡಲು ಬೇರೆ ತಂತಿಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಒತ್ತಡ ತಡೆಯಲಾಗದೆ ಕಂಬದ ಮೇಲ್ಭಾಗದಲ್ಲಿ ಕಂಬಕ್ಕೆ ಹಾಕಲಾಗಿರುವ ಕಾಂಕ್ರೀಟ್ ಕಿತ್ತು ಹೋಗಿ ಕಬ್ಬಿಣದ ರಾಡ್‌ಗಳು ಮಾತ್ರ ಉಳಿದುಕೊಂಡಿದೆ. ಒತ್ತಡಕ್ಕೆ ಕಂಬ ಒಂದು ಕಡೆಗೆ ವಾಲಿಕೊಂಡಿದೆ. ಇದೇ ಸ್ಥಳ ಮಡಿಕೇರಿ ಕದನೂರು, ಕಡಂಗ, ನಾಪೋಕ್ಲು ಕಡೆಗೆ ತೆರಳುವ ಸಾರ್ವಜನಿಕರಿಗೆ ಬಸ್ ತಂಗುದಾಣವಾಗಿದೆ.
ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ತೆರಳುತ್ತಿದ್ದು, ವಾಹನಗಳ ಸಂಚಾರದ ಒತ್ತಡ ಅಲ್ಲದೆ ಗಾಳಿ ಮಳೆಗೆ ಕಂಬ ಏನಾದರು ಮುರಿದು ಬಿದ್ದರೆ ಅಪಾಯ ತಪ್ಪಿದಲ್ಲ. ಸಾರ್ವಜನಿಕರ ಜೀವಕ್ಕೆ ಏನಾದರೂ ಅನಾಹುತವಾದರೆ ಇಲಾಖೆ ಸಂಬಂಧಿಕರಿಗೆ ಒಂದಷ್ಟು ಹಣ ನೀಡಿ ಕೈ ತೊಳೆದುಕೊಳ್ಳುತ್ತಾರೆ.
ಇದೇ ರಸ್ತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಇಲಾಖಾ ಅಧಿಕಾರಿಗಳು ಸಂಚರಿಸುತ್ತಿದ್ದರೂ ಯಾರ ಕಣ್ಣಿಗೆ ಬೀಳದಿರುವುದು ವಿಪರ‌್ಯಾಸವೇ ಸರಿ ಎಂದು ಅವರು ದೂರಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಇಲಾಖೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರಿ ಅನಾಹುತ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.