

ಬಾಗಲಕೋಟೆ: ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಡಿ.22ರಂದು ನಗರಕ್ಕೆ ಆಗಮಿಸಲಿದ್ದಾರೆ. ಡಿ.22 ರಿಂದ 27ರವರೆಗೆ ನಗರದ ವಿವಿಧೆಡೆ ಸ್ವಾಮಿಗಳ ಪಾದಪೂಜೆ, ಸಂಸ್ಥಾನ ಪೂಜೆ, ಸಂಜೆ ಧಾರ್ಮಿಕ ಉಪನ್ಯಾಸ, ಶ್ರೀಗಳ ಅನುಗ್ರಹ ಸಂದೇಶ ಹಮ್ಮಿಕೊಳ್ಳಲಾಗಿದೆ.
ನಗರದ ವಿಪ್ರ ಸಮಾಜ ಬಾಂಧವರು ಸ್ವಾಮಿಗಳಿಗೆ ಭವ್ಯ ಸ್ವಾಗತ ಕೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 22ರಂದು ಕಿಲ್ಲಾ ಭಾಗದ ಕೊತ್ತಲೇಶ ಮಂಗಲ ಭವನದಲ್ಲಿ ಬೆಳಗ್ಗೆ 8ಕ್ಕೆ ಸ್ವಾಮಿಗಳ ಪಾದಪೂಜೆ, ಸಂಜೆ 6ಕ್ಕೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್ ಹೊಸ ಸಭಾ ಭವನದಲ್ಲಿ ವಿದ್ವಾಂಸರ ಪ್ರವಚನ, 7ಕ್ಕೆ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಲಿದೆ.
23ರಂದು ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 8ಕ್ಕೆ, ವಿದ್ಯಾಗಿರಿ 7ನೇ ಕ್ರಾಸ್ ರಾಯರ ಮಠದಲ್ಲಿ ಬೆಳಗ್ಗೆ 9ಕ್ಕೆ ಶ್ರೀಗಳ ಪಾದಪೂಜೆ ನಡೆಯಲಿದೆ. 24ರಂದು ಬೆಳಗ್ಗೆ 8ಕ್ಕೆ ಗದ್ದನಕೇರಿ ಸಪ್ತಗಿರಿ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ಪಾದಪೂಜೆ, ಸಂಜೆ 6ಕ್ಕೆ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜ್ ಸಭಾ ಭವನದಲ್ಲಿ ಬೆಂಗಳೂರಿನ ಪಂಡಿತ್ ಡಾ.ಸತ್ಯಧ್ಯಾನಾಚಾರ್ ಕಟ್ಟಿ ಅವರಿಂದ ಉಪನ್ಯಾಸ ನಡೆಯಲಿದೆ.
25ರಂದು ಬೆಳಗ್ಗೆ 7ಕ್ಕೆ 108 ವಟುಗಳಿಂದ ಏಕಕಾಲಕ್ಕೆ ಸಂಧ್ಯಾವಂದನೆ ಕಾರ್ಯಕ್ರಮ, ಸಂಜೆ 6ಕ್ಕೆ ಬೆಂಗಳೂರಿನ ಪಂಡಿತ್ ವಿದ್ಯಾಧೀಶಾಚಾರ್ ಗುತ್ತಲ ಅವರ ಅಧ್ಯಕ್ಷತೆಯಲ್ಲಿ ಯುವಗೋಷ್ಠಿ ಹಾಗೂ ವಿಶೇಷ ಪ್ರವಚನ ಹಮ್ಮಿಕೊಳ್ಳಲಾಗಿದೆ. 25ರಂದು ಬೆಳಗ್ಗೆ 8ಕ್ಕೆ ನವನಗರ ಸತ್ಯಬೋಧ ರಾಯರ ಮಠದಲ್ಲಿ ಸ್ವಾಮಿಗಳ ಪಾದಪೂಜೆ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕು ಎಂದು ವಿಪ್ರ ಸಮಾಜದ ಹಿರಿಯರಾದ ನರಸಿಂಹ ಆಲೂರ, ಪಂ.ರಘೂತ್ತಮಾಚಾರ್ ನಾಗಸಂಪಿಗೆ, ಪಂ.ಭೀಮಸೇನಾಚಾರ್ ಪಾಂಡುರಂಗಿ, ದಯಾನಂದ ಕುಲಕರ್ಣಿ ಮತ್ತಿತರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.