2018ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಯಿಂದ ಬಾದಾಮಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಪ್ರಯಾಸಪಟ್ಟು ಗೆದ್ದ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಸ್ಥಾನ ಪಡೆದರು. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದು ಸಿದ್ದರಾಮಯ್ಯ ವರ್ಚಸ್ಸಿಗೆ ಸಾಕ್ಷಿ. 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಇಲ್ಲಿಂದ ಸ್ಪರ್ಧಿಸುತ್ತ್ತಾರಾ? ಎನ್ನುವುದು ನಿಗೂಢ. ಅವರೇ ಇಲ್ಲಿ ಸ್ಪರ್ಧಿಸಲಿ ಎನ್ನುವುದು ಅಭಿಮಾನಿಗಳ ಒತ್ತಾಸೆ. ಅವರು ಸ್ಪರ್ಧಿಸದಿದ್ದರೆ ಕಾಂಗ್ರೆಸ್ನಲ್ಲಿ ಟಿಕೆಟ್ ಕದನ ಮುಗಿಲುಮುಟ್ಟಲಿದೆ. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ, ಸಿದ್ದು ಆಪ್ತ ಹೊಳೆಬಸು ಶೆಟ್ಟರ, ಎಸ್.ಡಿ. ಜೋಗಿನ, ಮಹೇಶ್ ಹೊಸಗೌಡರ ಸೇರಿ ಅರ್ಧ ಡಜನ್ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹಾಗೂ ಮಹಾಂತೇಶ ಮಮದಾಪುರ ಸ್ಪರ್ಧಾಕಾಂಕ್ಷಿಗಳು. ಅವಕಾಶ ಸಿಗಬಹುದೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ. ಜೆಡಿಎಸ್ನಿಂದ ಹನಮಂತ ಮಾವಿನಮರದ ಸ್ಪರ್ಧೆ ಖಚಿತ.