

ಕೊಪ್ಪಳ: ಪ್ರೋತ್ಸಾಹಧನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಹಯೋಗದಲ್ಲಿ ಕಾರ್ಮಿಕರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ನಮ್ಮ ಮಕ್ಕಳು ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಸಲ್ಲಿಸಿದ ಅರ್ಜಿ ವಿಲೇವಾರಿಯಾಗಿಲ್ಲ. ಯಾರೋಬ್ಬರಿಗೂ ಹಣ ಬಂದಿಲ್ಲ. ಚೀಟಿ ನವೀಕರಣಕ್ಕೆ ವೇತನ ಚೀಟಿ ಕಡ್ಡಾಯಗೊಳಿಸಿದ್ದು, ನಮಗೆಲ್ಲ ಸಂಕಷ್ಟ ತಂದೊಡ್ಡಿದೆ. ಬೋಗಸ್ ಕಾರ್ಡ್‌ಗಳು ಹೆಚ್ಚುತ್ತಿದ್ದು, ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿಲ್ಲ. ಇಲಾಖೆ ನಿಯಂತ್ರಣ ಕೆಲಸ ಮಾಡುತ್ತಿಲ್ಲ. ಸದ್ಯ ವೈದ್ಯಕೀಯ ಮರುಪಾವತಿ ಯೋಜನೆ ಇದ್ದು, ಇದರಿಂದ ಚಿಕಿತ್ಸೆಗೆ ಖರ್ಚಾದ ವೆಚ್ಚವು ಮರುಪಾವತಿಯಾಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಯಾವುದೇ ಸಹಾಯಧನ ನೀಡುತ್ತಿಲ್ಲ. ಯಾವುದೇ ಕನಿಷ್ಠ ವೇತನ, ಪಿಂಚಣಿ ಸೇರಿ ಇತರ ಸೌಲಭ್ಯಗಳಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ತಕ್ಷಣ ಶೈಕ್ಷಣಿಕ ಪ್ರೋತ್ಸಾಹಧನ ಬಿಡುಗಡೆಗೊಳಿಸಬೇಕು. ವೈದ್ಯಕೀಯ ಮರುಪಾವತಿ ಪದ್ಧತಿ ಬಿಟ್ಟು, ಉಚಿತ ಚಿಕಿತ್ಸಾ ಸೌಲಭ್ಯ ಜಾರಿಗೊಳಿಸಬೇಕು. ಬೋಗಸ್ ಕಾರ್ಡ್‌ಗಳಿಗೆ ಬ್ರೇಕ್ ಹಾಕಬೇಕು. ವೇತನ ಚೀಟಿ ಕಡ್ಡಾಯಗೊಳಿಸಿದ್ದನ್ನು ಕೈ ಬಿಡಬೇಕು. ಕನಿಷ್ಠ ವೇತನ, ಪಿಂಚಣಿ ಸೌಳಬ್ಯ ಕಲ್ಪಿಸಬೇಕು. ಮನೆ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯ ಜಾರಿಗೊಳಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಅವಧಿಯೊಳಗೆ ವಿಲೇವಾರಿಗೊಳಿಸಬೇಕು. ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಬೇಕು. ನೈಜ ಕಾರ್ಮಿಕರಿಗೆ ಯೋಜನೆ ತಲುಪಿಸಬೇಕು. ಸ್ಲಂ ಬೋರ್ಡ್‌ಗೆ ಮಂಡಳಿಯಿಂದ ನೀಡಿದ ಅನುದಾನ ವಾಪಸ್ ಪಡೆಯಬೇಕು. ಸೆಸ್ ಪೋಲಾಗದಂತೆ ಕ್ರಮವಹಿಸಬೇಕು. ಹೊಸ ತಂತ್ರಾಂಶ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಫೆಡರೇಷನ್ ಪದಾಧಿಕಾರಿಗಳಾದ ಖಾಸಿಂ ಸರ್ದಾರ, ರಂಗಪ್ಪ ದೊರೆ, ಹನುಮೇಶ ಭೋವಿ, ಇಸ್ಮಾಯಿಲ್ ಇಟಗಿ, ಷಣ್ಮುಖಪ್ಪ ಬೀಡನಾಳ, ಅಲ್ಲಾಬಿ ಹ್ಯಾಟಿ ಸೇರಿ ನೂರಾರು ಕಾರ್ಮಿಕರಿದ್ದರು.