

ಚಿಕ್ಕೋಡಿ: ಬಹುದಿನಗಳಿಂದ ಬಾಕಿ ಉಳಿದಿರುವ ಕರಾಡ- ನಿಪ್ಪಾಣಿ-ಬೆಳಗಾವಿ ರೈಲು ಮಾರ್ಗದ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಬುಧವಾರ ಮನವಿ ಸಲ್ಲಿಸಿದರು.
ಈ ರೈಲು ಮಾರ್ಗ ಪೂರ್ಣಗೊಂಡರೆ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಜನರಿಗೆ ಅನುಕೂಲ ವಾಗಲಿದೆ. ಇದರೊಂದಿಗೆ ಕರಾಡ -ನಿಪ್ಪಾಣಿ- ಬೆಳಗಾವಿ, ಶೇಡಬಾಳ -ಅಥಣಿ -ವಿಜಯಪುರ, ಬೆಳಗಾವಿ -ಕೊಲ್ಲಾಪುರ, ಬೆಳಗಾವಿ -ಕಿತ್ತೂರು -ಧಾರವಾಡ, ಹಾಸನ- ಮಂಗಳೂರು ಮಾರ್ಗಗಳನ್ನು ಆರಂಭಿಸುವಂತೆ ಮನವಿ ಮಾಡಿದರು.
ಹುಬ್ಬಳ್ಳಿ -ದಾದರ ಎಕ್ಸ್‌ಪ್ರೆಸ್ (ಉಗಾರನಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ), ಶರಾವತಿ ಎಕ್ಸ್‌ಪ್ರೆಸ್ ಮತ್ತು ಪುದುಚೇರಿ ಎಕ್ಸ್‌ಪ್ರೆಸ್ (ಶೆಡಬಾಳ ರೈಲು ನಿಲ್ದಾಣನದಲ್ಲಿ ನಿಲುಗಡೆ), ಅಜ್ಮೀರ್ ಎಕ್ಸ್‌ಪ್ರೆಸ್ ಮತ್ತು ಹರಿಪ್ರಿಯಾ ಎಕ್ಸ್‌ಪ್ರೆಸ್ (ಕುಡಚಿ ಮತ್ತು ರಾಯಬಾಗ ಚಿಕೋಡಿ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ) ಕುರಿತು ಮನವಿ ಸಲ್ಲಿಸಿದರು.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಡಾ.ಅಜಿತ ಘೋಪಛಡೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇದ್ದರು.