ಬಾಕಿ ಮೊತ್ತಕ್ಕಾಗಿ ಸಾಂಕೇತಿಕ ಮೌನ ಪ್ರತಿಭಟನೆ ಇಂದು

h5-VSV Prasad
Published on

ಹುಬ್ಬಳ್ಳಿ: ರೈಲ್ವೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಮರುಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಂಡಿಯನ್ ರೈಲ್ವೆ ಇನ್​ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್​ನಿಂದ ನಗರದ ಡಿಆರ್​ಎಂಒ ಹಾಗೂ ಜಿಎಂ ಕಚೇರಿ ಮುಂದೆ ಮೌನ ಪ್ರತಿಭಟನೆ ಮಾ. 6ರಂದು ಬೆಳಗ್ಗೆ 10.30ಕ್ಕೆ ಏರ್ಪಾಟಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್​ಡಬ್ಲ್ಯುಆರ್​ಸಿಎ ಅಧ್ಯಕ್ಷ, ರೈಲ್ವೆ ಗುತ್ತಿಗೆದಾರ ಡಾ.ವಿ.ಎಸ್.ವಿ. ಪ್ರಸಾದ ಈ ವಿಷಯ ತಿಳಿಸಿದರು. ಎರಡು ವರ್ಷದಿಂದ ಜಿಎಸ್​ಟಿ ಕಡಿತ ಮಾಡಿಲ್ಲ. ಕೆಲವೆಡೆ ರೈಲ್ವೆ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗೆ ಹಣ ಪಾವತಿಸಿಲ್ಲ. ಮಾಡುವ ಕೆಲಸವನ್ನಾದರೂ ನಿಲ್ಲಿಸಿ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿಲ್ಲ. ಮೆಹೆಬೂಬ್​ನಗರದ ಗುತ್ತಿಗೆದಾರ ಡಿ.ವೆಂಟಕರೆಡ್ಡಿ ಅನ್ನುವವರು ರೈಲ್ವೆ ಅಧಿಕಾರಿಗಳ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಗುತ್ತಿಗೆದಾರರಿಗೆ ರೈಲ್ವೆ ಅಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆ. ಕಾಮಗಾರಿ ನಿರ್ವಹಿಸಿದರೆ ಒಂದು ತಪ್ಪು, ನಿಲ್ಲಿಸಿದರೆ ಒಂದು ತಪ್ಪು ಎನ್ನುವಂತಾಗಿದೆ. ದೇಶಾದ್ಯಂತ ಈ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ರೈಲ್ವೆ ವಿಭಾಗದ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪ್ರತಿಭಟನೆ ನಂತರ ಜಿಎಂಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ರೈಲ್ವೆ ಗುತ್ತಿಗೆದಾರರ ಬೇಡಿಕೆ ಈಡೇರದೇ ಹೋದರೆ ಮುಂದೊಂದು ದಿನ ತೀವ್ರ ಹೋರಾಟಕ್ಕಿಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು. ಗುತ್ತಿಗೆದಾರರಾದ ಸತ್ಯನಾರಾಯಣ, ಸೂರಜ್ ಜೈನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net