ಬಾಕಿ ಪ್ರಕರಣಗಳ ಇತ್ಯರ್ಥ ಶೀಘ್ರ

11manju2
Published on

ಬೆಳಗಾವಿ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಲೋಕ ಅದಾಲತ್‌ನಲ್ಲಿ 470ಕ್ಕೂ ಅಧಿಕ ಪ್ರಕರಣ ಇತ್ಯರ್ಥವಾಗದೆ ಬಾಕಿ ಉಳಿದ ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳಲಿವೆ ಎಂದು ಕಾಯಂ ಲೋಕ ಅದಾಲತ್ ಅಧ್ಯಕ್ಷರೂ ಆಗಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಪಲ್ಲೇದ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ನಗರದಲ್ಲಿ 2007ರಿಂದ ಕಾರ್ಯನಿರ್ವಹಿ ಸುತ್ತಿರುವ ಕಾಯಂ ಲೋಕ ಅದಾಲತ್ ಮೂಲಕ ಜನರು ತಮ್ಮ ಕುಂದುಕೊರತೆ, ವಿವಾದ ಇತ್ಯರ್ಥಪಡಿಸಿಕೊಳ್ಳಬಹುದು. ಅರ್ಜಿದಾರರು ವಕೀಲರೊಂದಿಗೆ ಅಥವಾ ವಕೀಲರು ಇಲ್ಲದೆಯೂ ತಮ್ಮ ಮೊಕದ್ದಮೆ ದಾಖಲಿಸಬಹುದು. ನಮ್ಮಲ್ಲಿ ಪ್ರಕರಣ ದಾಖಲಿಸಲು ಯಾವುದೇ ನ್ಯಾಯಾಲಯ ಶುಲ್ಕವಿಲ್ಲ.

ಕಾಯಂ ಲೋಕ ಅದಾಲತ್‌ನಲ್ಲಿ ನೀಡಲಾದ ತೀರ್ಪುಗಳನ್ನು ಕರ್ನಾಟಕ ಹೈಕೋರ್ಟ್ ಹೊರತುಪಡಿಸಿ, ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದರು. ಹೆಸ್ಕಾಂಗೆ ಸಂಬಂಧಿಸಿದ ಅವಘಡ, ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು, ಆಸ್ಪತ್ರೆ ಸೇವೆ, ವಿಮೆ ಸೇವೆ ಹಾಗೂ ಇತರೆ ವಿವಾದಗಳಿಗೆ ಸಂಬಂಧಿಸಿ ನಮ್ಮಲ್ಲಿ ಪ್ರಕರಣ ದಾಖಲಿಸಬಹುದು. ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡಿ, ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ. ಪ್ರತಿವಾದಿಗಳಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನಾವೇ ತೀರ್ಪು ನೀಡುತ್ತೇವೆ ಎಂದು ಹೇಳಿದರು.

ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಜನರು ಕಾಯಂ ಲೋಕ ಅದಾಲತ್ ಸಂಪರ್ಕಿಸಬೇಕು. ಇದು ಇತರ ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಗೊಳಿಸುತ್ತದೆ. ನಮ್ಮೊಂದಿಗೆ ವಕೀಲರ ಸಮಿತಿಯು ಅರ್ಜಿದಾರರಿಗೆ ದೂರು ಸಲ್ಲಿಸುವ ವಿಧಾನಗಳ ಕುರಿತು ಮಾರ್ಗದರ್ಶನ ನೀಡುತ್ತದೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ಹಾಜರಾಗುತ್ತದೆ. ಅಗತ್ಯವಿದ್ದಾಗ ಅರ್ಜಿದಾರರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವೇ ವಕೀಲರ ಶುಲ್ಕ ಪಾವತಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ಮಾತನಾಡಿ, ಈ ವರ್ಷದ ಮೂರನೇ ಅವಧಿಯ ಅದಾಲತ್ ಸೆಪ್ಟೆಂಬರ್ 13ರಂದು ನಡೆಸಲು ನಿರ್ಧರಿಸಿದ್ದೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಿದ್ದೆವು.

ಈ ಪೈಕಿ 16,665 ಪ್ರಕರಣ ಇತ್ಯರ್ಥಗೊಳಿಸಿದ್ದೇವೆ. ಮುಂದಿನ ಅದಾಲತ್‌ನಲ್ಲಿ 20 ಸಾವಿರ ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಿದ್ದೇವೆ. 90 ದಿನಗಳಲ್ಲಿ ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಪ್ರಕ್ರಿಯೆ ಜೂನ್ 1ರಿಂದ ಆರಂಭವಾಗಿದೆ. ಅಕ್ಟೋಬರ್ 7ರ ವರೆಗೆ ಅದು ಮುಂದುವರಿಯುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net