

ಬೀದರ್: ಇಲಾಖಾವಾರು ಬಾಕಿ ಉಳಿದ ಅನುದಾನಕ್ಕೆ ಸಂಬಂಧಿಸಿದಂತೆ ಕ್ರಮ ವಹಿಸಿ ಕಾಮಗಾರಿಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಅವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಿಆರ್ ಜಿಎಫ್, ಸಣ್ಣ ನೀರಾವರಿ, ಅಂಗನವಾಡಿ, 13ನೇ ಅನುದಾನ ಯೋಜನೆಯಡಿ ಮತ್ತು ಅಕ್ಷರ ದಾಸೋಹ ಶಾಲಾ ದುರಸ್ತಿ ಸೇರಿದಂತೆ ಬಾಕಿ ಉಳಿದ ವಿವಿಧ ಯೋಜನೆ ಅನುದಾನಕ್ಕೆ ಕೂಡಲೇ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 1,893 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 1,236 ಸರ್ಕಾರಿ ಅಂಗನವಾಡಿ ಕಟ್ಟಡಗಳಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಬಾಕಿ ಉಳಿದ ಅನುದಾನದಲ್ಲಿ 15 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಕೂಡಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕೆಂದು ಅಧ್ಯಕ್ಷೆ ನಿರ್ಮಲಾ ಸೂಚಿಸಿದರು.
ಜಿಪಂ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಮಾತನಾಡಿ, ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮ ಕಾಮಗಾರಿ ವಿಳಂಬದಿಂದ ನಡೆಯುತ್ತಿವೆ. ಬಾಕಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಹಾಲಿನ ಪೌಡರ್, ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳಿಗೆ ಸಮರ್ಪಕ ವಿತರಿಸುತ್ತಿಲ್ಲ. ಈ ಬಗ್ಗೆಯೂ ಕೂಡಲೇ ಗಮನಹರಿಸಿ ವಿತರಿಸಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಮಾತನಾಡಿ, ಜಿಲ್ಲೆಯ ವಿವಿಧ ಶಾಲೆಗಳಿಗೆ ವಿತರಿಸಿದ ಡೆಸ್ಕ್ ಮತ್ತು ಅಲಮಾರಿ ಗುಣಮಟ್ಟ ಬಗ್ಗೆ ತಂಡ ರಚಿಸಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಸಭೆ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ತಾಪಂ ಅಧ್ಯಕ್ಷರು, ಜಿಪಂ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ತಾಪಂಗೆ ಬಂತು ಕೇಂದ್ರ
ಪುರಸ್ಕೃತ ನಿಧಿ ಅನುದಾನ
ಕೇಂದ್ರ ಸರ್ಕಾರದ ಪುರಸ್ಕೃತ ನಿಧಿ-1ರಿಂದ ಜಿಲ್ಲೆಯ ಐದು ತಾಲೂಕು ಪಂಚಾಯಿತಿಗಳಿಗೆ ಸುಮಾರು 65 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನದಲ್ಲಿ ಕೈಗೊಳ್ಳಬೇಕಾದ ಕೆಲಸಕಾರ್ಯಗಳ ಕುರಿತು ಮಾರ್ಗಸೂಚಿ ನೀಡುವಂತೆ ಹುಮನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಸಭೆ ಗಮನ ಸೆಳೆದರು. 2014-15ರಿಂದ 2019-20ರವರೆಗಿನ ಅವಧಿವರೆಗಿನ ಅನುದಾನ ಇತ್ತೀಚೆಗೆ ಬಂದಿದೆ. ಈ ಅನುದಾನದಲ್ಲಿ ವಿವಿಧ ಮೂಲಸೌಲಭ್ಯ ಕಾಮಗಾರಿಗಳು ಬರುವ ಮಾರ್ಚ್ ಅಂತ್ಯದೊಳಗೆ ಮಾಡದಿದ್ದರೆ, ಇದು ಲ್ಯಾಪ್ಸ್ ಆಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಕೂಡಲೇ ಇದರ ಗೈಡ್ ಲೈನ್ ನೀಡಿ ಅನುದಾನದ ಬಳಕೆಗೆ ಕ್ರಮ ಕೈಗೊಳ್ಳಲು ಕೋರಿದರು. ಈ ಅನುದಾನ ಬಗ್ಗೆ ಜಿಪಂ ಅಧಿಕಾರಿಗಳಲ್ಲಿ ಸಹ ಸ್ಪಷ್ಟ ಮಾಹಿತಿ ಇರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಲೆಕ್ಕಾಧಿಕಾರಿಗಳು, ನಾಳೆ ಈ ಬಗ್ಗೆ ಗೈಡ್ ಲೈನ್ ಏನಿದೆ ನೋಡಿ ವಿವರ ನೀಡಲಾಗುವುದು. ಆದಷ್ಟು ಬೇಗ ತಾಪಂನವರಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳುವುದಕ್ಕಾಗಿ ಕ್ರಮ ಜರುಗಿಸುವುದಾಗಿ ಹೇಳಿದರು.