

ಮೈಸೂರು: ಬಾಂಬ್ ಬೆದರಿಕೆಯ ಇ-ಮೇಲ್ ನಗರದ ವಿವಿಧ ಸ್ಥಳದಲ್ಲಿ ಶುಕ್ರವಾರ ಗಲಿಬಿಲಿ ಉಂಟು ಮಾಡಿತು. ತಪಾಸಣೆ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಸಾಬೀತಾಗಿದೆ.
ನಗರದ ವಿವಿಧೆಡೆ ಬಾಂಬ್ ಇರಿಸಿದ್ದು, 24 ಗಂಟೆಗಳಲ್ಲಿ ಸ್ಫೋಟಿಸಲಿದೆ ಎಂದು ನಗರ ಪೊಲೀಸ್ ಆಯುಕ್ತರ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶವು ಮಧ್ಯರಾತ್ರಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ನಗರಾದ್ಯಂತ ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮ ವಹಿಸಿದರು.
ಅನಾಮಧೇಯ ವ್ಯಕ್ತಿ ಹೇಳಿದ್ದ ಸ್ಥಳಗಳನ್ನು ನಗರ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದರು. ತಾಸುಗಟ್ಟಲೇ ಶೋಧ ನಡೆಸಿದ ಬಳಿಕ ಹುಸಿ ಬೆದರಿಕೆ ಎಂಬುದು ರುಜುವಾತು ಆಯಿತು. ಆದರೂ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ನಗರಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.
ಈ ಕುರಿತು ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಪ್ರಕರಣ ದಾಖಲಾಗಿದೆ. ಇ- ಮೇಲ್ ಕಳುಹಿಸಿದವರು ಯಾರೆಂಬುದನ್ನು ಪತ್ತೆ ಹಚ್ಚಲು ತನಿಖೆ ಕೈಗೊಳ್ಳಲಾಗಿದೆ. ಜತೆಗೆ, ಹೋಟೆಲ್, ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.