

ವಿಜಯವಾಣಿ ವಿಶೇಷ ಡಂಬಳ
ಶಿಂಗಟಾಲೂರು ಏತ ನೀರಾವರಿ ಕಾಲುವೆ ಮೂಲಕ ಡಂಬಳ ವ್ಯಾಪ್ತಿಯಲ್ಲಿ ನಿರ್ವಿುಸಿದ ಬಾಂದಾರ, ಚೆಕ್ಡ್ಯಾಂ, ಬ್ರಿಜ್ ಕಮ್ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
2019-20ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಯೋಜನೆಯಡಿ ಡಂಬಳ- ಹೊಸಡಂಬಳ ಮಧ್ಯೆ ಇರುವ ಕಲ್ಲು ಹಳ್ಳಕ್ಕೆ 16 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಸರಣಿ ಚೆಕ್ ಡ್ಯಾಂ, 2017ರಲ್ಲಿ ಬರದೂರ-ತಾಮ್ರಗುಂಡಿಗೆ ತೆರಳುವ ರಸ್ತೆಯಲ್ಲಿ 2 ಕೋಟಿ ರೂ. ಅನುದಾನದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ವಿುಸಲಾಗಿದೆ.
ಮೇವುಂಡಿ ಐತಿಹಾಸಿಕ ದಿಡಗೇಶ್ವರ ಬಾಂದಾರ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಬತ್ತಿದ್ದ ನೂರಾರು ಕೊಳವೆ ಬಾವಿಗಳು ಮರುಜೀವ ಪಡೆದಿವೆ. ಬಾಂದಾರದ ಸುತ್ತಮುತ್ತ 10 ಕಿಮೀ ಅಂತರದಲ್ಲಿ ಇರುವ ಬೋರ್ವೆಲ್ಗಳ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಇದರಿಂದಾಗಿ ಈ ಭಾಗದ ರೈತರು ಹೈನುಗಾರಿಕೆ ಮಾಡಲು ಹಾಗೂ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ಬಾಂದಾರ, ಚೆಕ್ ಡ್ಯಾಂ ಭರ್ತಿಯಾಗಿರುವುದರಿಂದ ಪಂಪ್ಸೆಟ್ ಮೂಲಕ ನೀರು ಹಾಯಿಸಿ ಹಿಂಗಾರಿ ಜೋಳ, ಕಡಲೆ, ಗೋಧಿ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಈ ಭಾಗದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಂತರ್ಜಲ ವೃದ್ಧಿಗಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ. ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವಂತಾಗಿದೆ. ಅನ್ನದಾತರ ಬದುಕು ಹಸನಾಗಿಸಲು ಕ್ಷೇತ್ರದ ನಾನಾ ಕಡೆ ಚೆಕ್ ಡ್ಯಾಂ, ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಕೆರೆ ಅಭಿವೃದ್ಧಿ ಕಾರ್ಯ ಮಾಡಲು ವಿಶೇಷ ಒತ್ತು ನೀಡಲಾಗಿದೆ. | ಕಳಕಪ್ಪ ಬಂಡಿ, ಶಾಸಕ ರೋಣ