

ಹಾಸನ: ಬಾಂಗ್ಲಾದೇಶದಲ್ಲಿರುವ ಹಿಂದುಗಳ ರಕ್ಷಣೆ ಮತ್ತು ದೇವಾಲಯಗಳ ಸಂರಕ್ಷಣೆ ಮಾಡಲು ಭಾರತ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.
ಹಿಂದು ಜನಜಾಗೃತಿ ವೇದಿಕೆಯ ಗೋವಿಂದರಾಜು ಈ ವೇಳೆ ಮಾತನಾಡಿ, ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಚಳವಳಿಯು ಅತ್ಯಂತ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಚಾರದಲ್ಲಿ ಆರಂಭವಾದ ಹಿಂಸಾಚಾರ ಇದೀಗ ತಾರಕಕ್ಕೇರಿದೆ. ಈ ಹಿಂಸಾಚಾರ ಈಗ ಅರಾಜಕತೆಗೆ ತಿರುಗಿದೆ. ಸರ್ಕಾರ ವಿರೋಧಿ ಚಳವಳಿಯು ಈಗ ಹಿಂದೂಗಳ ವಿರುದ್ಧ ಶುರುವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಂಗ್ಲಾದೇಶದ 27 ಸ್ಥಳಗಳಲ್ಲಿ ಹಿಂದುಗಳನ್ನು ಗುರಿಯಾಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಹಿಂದುಗಳನ್ನು ಕೊಲ್ಲುವುದು, ಮನೆಗಳ ಮೇಲೆ ದಾಳಿ ಮಾಡುವುದು, ಅಂಗಡಿಗಳನ್ನು, ದೇವಾಲಯಗಳನ್ನು ನಾಶ ಮಾಡುವುದು, ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಇತ್ಯಾದಿ ದೌರ್ಜನ್ಯಗಳು ನಡೆಯುತ್ತಿವೆ. ಹಿಂದು ಕಾರ್ಪೊರೇಟರ್, ಪತ್ರಕರ್ತನನ್ನು ಕೊಲೆ ಮಾಡಲಾಗಿದೆ. ಈ ಘಟನೆಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನೆಯು ಹಿಂದೂಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದರೂ ಭಾರತ ಸರ್ಕಾರ ಅದರ ಮೇಲೆ ಅವಲಂಬಿಸದೆ ಹಿಂದು ಸಮಾಜ ಮತ್ತು ದೇವಾಲಯಗಳ ಸುರಕ್ಷತೆಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದು ಜನಜಾಗೃತಿಯ ವೆಂಕಟೇಶ್, ಪುಟ್ಟಸ್ವಾಮಿ, ಬಸವರಾಜು, ಬ್ಯಾಟಾಚಾರ್, ಅನಂತರಾಜು, ಶಶಿಧರ್, ಸುರೇಶ್, ಮೋಹನ್ ಕುಮಾರ್, ಪವನ್, ಸೋಮಶೇಖರ್, ಶಿವಣ್ಣ ಇತರರು ಉಪಸ್ಥಿತರಿದ್ದರು.