ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

8
Published on

ಮೈಸೂರು: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಹಿಂದುಗಳ ರಕ್ಷಣೆಗೆ ಅಲ್ಲಿಯ ಸರ್ಕಾರ ಮುಂದಾಗಬೇಕು. ಇಸ್ಕಾನ್ ಧಾರ್ಮಿಕ ನಾಯಕರು ಸೇರಿದಂತೆ ಎಲ್ಲ ಹಿಂದುಗಳಿಗೂ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಧು ಭರತ್ ಮಾತನಾಡಿ, ಹಿಂದುಗಳ ಮೇಲೆ ಹಲ್ಲೆ ನಡೆಯುತ್ತಿರುವ ಆಕ್ರಮಣದ ವಿರುದ್ಧ ಹೋರಾಟ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಬಾಂಗ್ಲಾ ಉದಯಕ್ಕೆ ಕಾರಣವಾದ ಭಾರತದ ಜನರು ಹಿಂದುಗಳ ರಕ್ಷಣೆ ಮಾಡಿ ಎನ್ನುವ ಪರಿಸ್ಥಿತಿಯಲ್ಲಿದ್ದೇವೆ ಎಂದರು.

ಮತೀಯ ಶಕ್ತಿಗಳು ಹಿಂದು ಹೆಣ್ಣು ಮಕ್ಕಳ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. 1947ರಲ್ಲಿ ಶೇ.22 ಇದ್ದ ಹಿಂದುಗಳ ಸಂಖ್ಯೆ ಶೇ.16ಕ್ಕೆ ಕುಸಿದಿತ್ತು. ಈಗ ಅಲ್ಲಿ ಹಿಂದುಗಳ ಸಂಖ್ಯೆ ಪ್ರಸ್ತುತ ಜನಸಂಖ್ಯೆ 7.5ರಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶೇಖ್‌ಹಸೀನಾ ಸರ್ಕಾರ ನಂತರದಲ್ಲಿ ಹಿಂದುಗಳ ಮೇಲೆ ದಾಳಿ ಆಗಿದೆ. ಮಠಗಳನ್ನು ಧ್ವಂಸ ಮಾಡಿದ್ದಾರೆ. ಹಿಂದುಗಳು ಎಷ್ಟು ಸಹಿಸಬೇಕೋ ಅಷ್ಟು ಸಹಿಸಿದ್ದಾರೆ. ಹಬ್ಬ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ. ಬಾಂಗ್ಲಾದ ಮಕ್ಕಳಿಗೆ ಶಿಕ್ಷಣ, ವೃದ್ಧಾಪ್ಯ ವೇತನ ಸೇರಿದಂತೆ ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಾ ಬಂದಿರುವ ಇಸ್ಕಾನ್‌ಗೆ ಮತೀಯ ಶಕ್ತಿ ಎನ್ನುವ ಹಣೆಪಟ್ಟಿ ಕಟ್ಟಿ ಧರ್ಮಗುರುಗಳನ್ನು ಬಂಧಿಸಿ ಜೈಲಿಗಟ್ಟಿದೆ. ಅಲ್ಲದೆ, ಸಂಘಟನೆಯನ್ನು ನಿಷೇಧಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಸಂಘಟಕರಾದ ಮಮತಾ ಮಾತನಾಡಿ, ಬಾಂಗ್ಲಾದೇಶ ಉಗಮದ ಸಮಯದಲ್ಲಿ ಇಸ್ಕಾನ್ ಸಂಸ್ಥೆ ನೀಡಿದ ಸಹಾಯವನ್ನು ಇಂದು ಮರೆತಿದ್ದಾರೆ. ಯಾವುದೋ ಇಸ್ರೇಲ್, ಇರಾಕ್‌ನಲ್ಲಿ ಯುದ್ಧ ಆದಾಗ ಮರುಗುವ ನಾವು, ನಮ್ಮ ಹಿಂದುಗಳು ಏಕೆ ನಿತ್ರಾಣರಾಗಿದ್ದಾರೆ ಎಂದರು.

ಸಕ್ಷಮ ಅಧ್ಯಕ್ಷ ಜಯರಾಮ್ ಮಾತನಾಡಿ, ನಾವು ಯಾವ ತಪ್ಪು ಮಾಡಿದ್ದೇವೆ ಎಂದು ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ಆಗುತ್ತಿದೆ ತಿಳಿಯುತ್ತಿಲ್ಲ. ಭಾರತ ಬಾಂಗ್ಲಾ ದೇಶಕ್ಕೆ ರಾಜಕೀಯ ಸಹಕಾರ ಅಲ್ಲದೆ, ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ಕೊಟ್ಟಿದೆ. ಭಾರತ ಹಿಂದಿನ ಸರ್ಕಾರದ (ಶೇಖ್ ಹಸೀನಾ) ಜತೆಗೆ ಉತ್ತಮ ರೀತಿಯ ಬಾಂಧವ್ಯ ಇಟ್ಟುಕೊಂಡಿದ್ದು ತಪ್ಪಾ ಎಂದು ಪ್ರಶ್ನಿಸಿದರು.

ಹಿಂದು ಹಿತರಕ್ಷಣಾ ಸಮಿತಿ ಮೈಸೂರು ಸಂಚಾಲಕ ತಿಲಕ್, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ, ಮುಖಂಡರಾದ ಕೇಶವಮೂರ್ತಿ, ಚಂದ್ರಶೇಖರ್, ಗಿರಿಧರ್, ಡಿ.ಟಿ.ಪ್ರಕಾಶ್, ಹೇಮಾ ನಂದೀಶ್, ಲಕ್ಷ್ಮೀ, ಸವಿತಾ ಘಾಟ್ಕೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net