

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗೌರಮ್ಮ ಪಿ. ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡುವ 2022 ಮತ್ತು 2023ನೇ ಸಾಲಿನ ಮಹಲಿಂಗರಂಗ ಪ್ರಶಸ್ತಿಗಳಿಗೆ ಕ್ರಮವಾಗಿ ರಂಗಕರ್ಮಿ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಹಾಗೂ ಸಾಹಿತಿ ಕೆ.ಎನ್. ಸ್ವಾಮಿ ಆಯ್ಕೆಯಾಗಿದ್ದಾರೆ.
ತಲಾ 15 ಸಾವಿರ ನಗದು, ಸ್ಮರಣಿಕೆ ಒಳಗೊಂಡ ಪ್ರಶಸ್ತಿಯನ್ನು ಜು.30ರ ಮಧ್ಯಾಹ್ನ 3.30 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾ.ಮ. ಬಸವರಾಜಯ್ಯ ಅವರು ಜನಮುಖಿ ಚಿಂತಕರಾಗಿದ್ದು ಕತೆ, ನಾಟಕ ಹಾಗೂ ಸಂಪಾದನಾ ಕೃತಿಗಳ ಮೂಲಕ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ನಟನೆಯಲ್ಲೂ ಅನೇಕ ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಪಳಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಮ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಅತ್ಯುತ್ತಮ ಪತ್ರಕರ್ತ ಇತರೆ ಪ್ರಶಸ್ತಿ ಗಳಿಸಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಕೆ.ಎನ್. ಸ್ವಾಮಿ ಮಕ್ಕಳ ಲೋಕ ಸಂಘಟನೆ ಮೂಲಕ ಗಮನ ಸೆಳೆದವರು. ಕನ್ನಡ ಶಿಕ್ಷಕ, ಉಪನ್ಯಾಸಕರಾಗಿ ಅನೇಕ ಮಕ್ಕಳಲ್ಲಿ ಕನ್ನಡಪ್ರೇಮ ಬಿತ್ತಿದ್ದಾರೆ. ಕವನ, ಚಿಂತನ ಮಂಥನ ಬರಹಗಳಿಂದ ಹೆಸರಾದ ಅವರು, ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಅರಸಿ ಬಂದಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಮೋತಿ ಆರ್.ಪರಮೇಶ್ವರ ರಾವ್ ಆಗಮಿಸಲಿದ್ದಾರೆ ಎಂದರು.
ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 3 ಗಂಟೆಗೆ ಗಮಕ ಕಲಾವಿದೆ ಸುಜಾತಾ ಗೋಪಿನಾಥ್ ಅವರಿಂದ ಅನುಭವಾಮೃತ ಕಾವ್ಯ ಕುರಿತಂತೆ ಗಮಕ ವಾಚನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಕಾರ್ಯಕಾರಿ ಸಮಿತಿಯ ಸದಸ್ಯೆ ಸತ್ಯಭಾಮಾ ಮಂಜುನಾಥ್, ಮಲ್ಲಮ್ಮ ನಾಗರಾಜ್, ರುದ್ರಾಕ್ಷಿ ಬಾಯಿ ಇತರರಿದ್ದರು.
---