

ಚಾಮರಾಜನಗರ: ಬಾ ನಲ್ಲೆ ಮದುವೆಗೆ ಚಿತ್ರವು ಡಿ. 15 ರಂದು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಯೋಗೇಶ್‌ನಂದನ್ ಮಾಹಿತಿ ನೀಡಿದರು.
ಮೂಲತಃ ಚಾಮರಾಜನಗರ ಜಿಲ್ಲೆಯ ಭುಜಗನಪುರ ಗ್ರಾಮದವನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಬೇಕು ಎಂಬ ಮಹದಾಸೆಯಿಂದ ಬಾ ನಲ್ಲೆ ಮದುವೆಗೆ ಸಿನಿಮಾವನ್ನು ನಿರ್ದೇಶಿಸಿ ಸ್ವತಃ ನಾನೇ ನಿರ್ಮಾಣವನ್ನು ಮಾಡಿದ್ದೇನೆ. ಸಂಪೂರ್ಣ ಚಿತ್ರವೂ ಚಾಮರಾಜನಗರ ಭಾಷಾ ಸೊಗಡನ್ನು ಒಳಗೊಂಡಿದ್ದು, ಜಿಲ್ಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ ಎಂದು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಾ ನಲ್ಲೇ ಮದುವೆಗೆ ಚಿತ್ರವು ಹಳ್ಳಿಹುಡುಗನ ಪ್ರೇಮಕಥೆ ಆಧರಿಸಿದ್ದು, ಇಂದಿನ ಯುವಜನಾಂಗಕ್ಕೆ ಇಷ್ಠವಾಗುವ ಚಿತ್ರ ಇದಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, 4 ಸಹಾಸ ದೃಶ್ಯಗಳಿದೆ. ಸಿನಿಮಾದ ನಾಯಕ ನಟನಾಗಿ ಅರ್ಜುನ್, ನಾಯಕಿಯಾಗಿ ಶೋಭ, ಹಿರಿಯ ಕಲಾವಿದರಾದ ಅಂಜನಪ್ಪ, ಮೈಸೂರು ಮಂಜುಳ, ಗೋವಿಂದಪ್ಪ, ಜಿಲ್ಲೆಯ ಕಲಾವಿದ ಉಮ್ಮತ್ತೂರು ಬಸವರಾಜು ಹಾಗೂ ಇನ್ನಿತರೆ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್‌ಕುಮಾರ ಸಂಗೀತ ಇದ್ದು, ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ, ಉಮ್ಮತ್ತೂರು, ದಾಸನೂರು, ಭುಜಗನಪುರ ಹಾಗೂ ಇತರೆ ಗ್ರಾಮಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರವು ಉತ್ತಮವಾಗಿ ಮೂಡಿಬಂದಿದ್ದು, ಇಡೀ ಕುಟುಂಬವೇ ಕುಳಿತು ನೋಡುವ ಚಿತ್ರವಾಗಿದೆ ಎಂದರು.
ಡಿ.15 ರಂದು ರಾಜ್ಯದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ಚಾಮರಾಜನಗರದ ಶ್ರೀಬಸವೇಶ್ವರ ಚಿತ್ರ ಮಂದಿರದಲ್ಲಿ ಚಿತ್ರ ತೆರೆಕಾಣಲಿದೆ. ಜಿಲ್ಲೆಯ ಜನತೆ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸುವ ಮೂಲಕ ಚಾಮರಾಜನಗರದ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಚಿತ್ರದ ನಾಯಕ ಅರ್ಜುನ್, ಸಹಕಲಾವಿದ ಸಚಿನ್, ಉಮ್ಮತ್ತೂರುಬಸವರಾಜು ಹಾಜರಿದ್ದರು.