

ಬೇಲೂರು: ಬಹುಜನ ಚಳವಳಿ ಕೇವಲ ರಾಜಕೀಯ ಹೋರಾಟಕ್ಕೆ ಸೀಮಿತವಾಗದೆ ಹಾಗೂ ಸೋಲಿಗೆ ಧೃತಿಗೆಡದೆ ಅದಕ್ಕಿಂತ ಮಿಗಿಲಾದ ಧ್ಯೇಯೋದ್ದೇಶಗಳೊಂದಿಗೆ ಮುಂದೆ ಸಾಗುತ್ತಿದೆ ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಹೇಳಿದರು.
ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಬಿಎಸ್‌ಪಿ ತಾಲೂಕು ಘಟಕದಿಂದ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಸಮಿತಿ ಪುನರ್ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮನುವಾದಿ ಪಕ್ಷಗಳು ಹಣ, ಹೆಂಡದ ಹೊಳೆ ಹರಿಸಿ ಗೆಲುವು ಸಾಧಿಸಿವೆ. ಈ ದೇಶದ ಬಹುಸಂಖ್ಯಾತರಿಗೆ ತಮ್ಮ ಹಕ್ಕುಗಳ ಅರಿವು, ಅಧಿಕಾರದ ಮಹತ್ವ ಮತ್ತು ಶಕ್ತಿ ತಿಳಿದಾಗ ಮನುವಾದಿಗಳ ಮೋಸದ ಬಲೆಯಿಂದ ಹೊರ ಬರಲಿದ್ದಾರೆ. ಈಗ ನಾವು ಬಹುಸಂಖ್ಯಾತರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಬೇಕಿದೆ ಎಂದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ಸಾಮಾಜಿಕ ಪರಿವರ್ತನೆಯಾಗಲು ಬಿಎಸ್ಪಿ ಪಾತ್ರ ಬಹುಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಗಂಗಾಧರ್ ಬಹುಜನ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ವಿಮೋಚನೆಗಾಗಿ ಗಂಗಾಧರ್ ಬಹುಜನ್ ಅವರಂತವರನ್ನು ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳಿಸಬೇಕು ಎಂದರು.
ತಾಲೂಕು ಅಧ್ಯಕ್ಷರಾಗಿ ಪ್ರಕಾಶ್ ಕೆಸಗೋಡು, ಸಂಯೋಜಕ ಉಮೇಶ್, ಉಪಾಧ್ಯಕ್ಷರಾಗಿ ನಿಂಗರಾಜ್ ಮತ್ತು ಜಯಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸೋಮಶೇಖರ್, ಐಟಿ ಸೆಲ್ ಸಂಯೋಜಕ ಶಿವಪ್ಪ, ಬಿವಿಎಫ್ ಸಂಯೋಜಕ ಯೋಗೀಶ್, ಲೋಕೇಶ್, ಹೋಬಳಿ ಅಧ್ಯಕ್ಷರಾಗಿ ಹೊನ್ನಯ್ಯ, ಪುಟ್ಟಸ್ವಾಮಿ, ಅನಿಲ್ ಅವರನ್ನು ನೇಮಕ ಮಾಡಲಾಯಿತು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಸಂಯೋಜಕ ಲಕ್ಷ್ಮಣ್ ಕೀರ್ತಿ, ಎಚ್.ಬಿ.ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಸುರೇಂದ್ರ, ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ, ವಕೀಲ ರಾಜೇಶ್ ಇದ್ದರು.