ಬಹುಶಃ ಭವಾನಿ ಅಕ್ಕ ನಶೆಯ ಮೇಲೆ ಮಾತನಾಡಿರಬೇಕು: ಪ್ರೀತಂ ಗೌಡ

ಬಹುಶಃ ಭವಾನಿ ಅಕ್ಕ ನಶೆಯ ಮೇಲೆ ಮಾತನಾಡಿರಬೇಕು: ಪ್ರೀತಂ ಗೌಡ
Published on

ಹಾಸನ: ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ನ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಮತ್ತು ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ನಡುವೆ ದಿನೇದಿನೆ ಮಾತಿನ ಫೈಟ್ ಹೆಚ್ಚುತ್ತಿದ್ದು, ಭವಾನಿ ಅವರು ಹೊಳೆನರಸೀಪುರದಲ್ಲಿ ಸೋಮವಾರ ಪ್ರೀತಂಗೌಡರ ವಿರುದ್ಧ ನೀಡಿದ್ದ ಹೇಳಿಕೆಗೆ ಮಂಗಳವಾರ ಶಾಸಕ ಪ್ರೀತಂ ಗೌಡ ಹಾಸನದಲ್ಲಿ ಹೆಚ್ಚು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಪರಸ್ಪರ ವಾಗ್ದಾಳಿ ರಾಜಕೀಯ ಮೀರಿ ವೈಯಕ್ತಿಕ ವಿಷಯ ಮತ್ತು ಅಭ್ಯಾಸಗಳನ್ನು ಪ್ರಸ್ತಾಪಿಸುವ ಮಟ್ಟಕ್ಕೆ ಇಳಿದಿದೆ. ಹೊಳೆನರಸೀಪುರದಲ್ಲಿ ಸೋಮವಾರ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭವಾನಿ ರೇವಣ್ಣ ಅವರು, ‘ಹಳ್ಳಿಮೈಸೂರು ವಿಭಾಗದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಹೆಂಡತಿ ಮಕ್ಕಳನ್ನು ಸಾಕಲಾಗದೆ ನಮ್ಮ ಬಳಿ ಬಂದು ದಮ್ಮಯ್ಯ ಗುಡ್ಡೆ ಹಾಕಿ ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದೆ. ಈಗ ಅವರ ಮಗ ನಮ್ಮ ವಿರುದ್ಧ ಮಾತನಾಡುತ್ತಿದ್ದಾನೆ’ ಎಂಬುದಾಗಿ ಏಕ ವಚನದಲ್ಲಿಯೇ ಟೀಕಿಸಿದ್ದರು.

ಮಂಗಳವಾರ ಜಿಲ್ಲಾ ಹಾಕಿ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರೀತಂಗೌಡ, ‘ನಮ್ಮ ತಂದೆ ಒಂದೇ ಒಂದು ದಿನ ಬಿಬಿಎಂಪಿಯಲ್ಲಿ ಕೆಲಸ ಮಾಡಿರುವ ದಾಖಲೆ ನೀಡಿದರೆ, ಅಥವಾ ರೇವಣ್ಣನವರು ಶಿಫಾರಸು ಮಾಡಿರುವ ಪತ್ರ ನೀಡಿದರೆ, ನಾನು ಆ ಕ್ಷಣವೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಜೀವನದಿಂದಲೇ ನಿವೃತ್ತಿ ಆಗುತ್ತೇನೆ’ ಎಂದು ಸವಾಲು ಹಾಕಿದರು.

ಅಲ್ಲದೆ, ‘ಬಹುಶಃ ಭವಾನಿ ಅಕ್ಕ ಅವರು ನಶೆಯ ಮೇಲೆ ಮಾತನಾಡಿರಬೇಕು. ಅದಕ್ಕೆ ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ. ಈ ಮಾತನ್ನು ನಾನು ಹೇಳುತ್ತಿಲ್ಲ, ನನ್ನ ಕ್ಷೇತ್ರದ ಜನ ಮಾತನಾಡುತ್ತಿದ್ದಾರೆ. ತಾಯಿ ಮತ್ತು ಮಗ (ಸಂಸದ ಪ್ರಜ್ವಲ್) ಇಬ್ಬರೂ ರಾತ್ರಿ ಎರಡು ಗಂಟೆಯವರೆಗೂ ನಶೆ ಏರಿಸಿಕೊಳ್ಳುವುದರಿಂದ ಬೆಳಗ್ಗೆ ಆದರೂ ನಶೆ ಇಳಿದಿರುವುದಿಲ್ಲ ಎಂಬುದಾಗಿ ಜನ ಮಾತನಾಡುತ್ತಾರೆ’ ಎಂದು ವ್ಯಂಗ್ಯದ ಬಾಣ ಬಿಟ್ಟರು.

ನಮ್ಮ ತಾಯಿ ನೂರಾರು ಎಕರೆ ಭೂಮಿಯ ಖಾತೆದಾರರಾಗಿದ್ದರು, ನಮ್ಮ ತಂದೆ ಹತ್ತಾರು ಎಕರೆ ಭೂಮಿ ಹೊಂದಿದ್ದರು. ನಾನು ಒಬ್ಬ ಸಾಮಾನ್ಯ ಕುಟುಂಬದಿಂದ ಬಂದು ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಭವಾನಿ ಅವರು ರೇವಣ್ಣ ಅವರನ್ನು ಮದುವೆ ಆಗುವ ಮೊದಲು ಅವರ ಕುಟುಂಬ ಎಷ್ಟು ಗುಂಟೆ ಜಮೀನು ಹೊಂದಿತ್ತು ಎಂಬುದನ್ನು ಹೇಳಲಿ. ತಾವೇನೋ ಮೈಸೂರು ಮಹಾರಾಜರ ವಂಶಸ್ಥರಿಗಿಂತ ಶ್ರೀಮಂತರು ಎಂಬಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ತಿರುಗೇಟು ನೀಡಿದರು.

ಒಬ್ಬ ಶಾಸಕ ಎಂದರೆ ಹತ್ತಾರು ಜನ ಶಿಫಾರಸಿಗಾಗಿ ಬರುವುದು ಸಾಮಾನ್ಯ. ಅದಕ್ಕೆ ತಮ್ಮಿಂದಲೇ ಅವರ ಜೀವನ ನಡೆಯುತ್ತಿದೆ ಎಂದು ಮಾತನಾಡುವುದು ದುರಹಂಕಾರ. ಶಾಸಕ ರೇವಣ್ಣ ಅವರು ಯಾವತ್ತೂ ಈ ರೀತಿ ವೈಯಕ್ತಿಕ ಟೀಕೆ ಮಾಡಿಲ್ಲ. ಅವರಿಗೆ ಅವರ ತಂದೆ ಸಂಸ್ಕಾರ ಕಲಿಸಿದ್ದಾರೆ. ಆದರೆ ಭವಾನಿ ಅಕ್ಕ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ಅವರಿಗೆ ಯಾರೂ ಸಂಸ್ಕಾರ ಕಲಿಸಿಲ್ಲ ಎಂದು ಕಾಣುತ್ತದೆ. ಅದಕ್ಕೇ ಆ ರೀತಿ ಮಾತನಾಡುತ್ತಾರೆ. ಇವರಿಬ್ಬರ ನಡುವೆ ಸಿಲುಕಿಕೊಂಡು ಪಾಪ ರೇವಣ್ಣನವರು ನಲುಗಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಂದೆ ತಾಯಿ ಅಥವಾ ಮಗ ಮಾತನಾಡುವಾಗ ಆಲ್ಕೋಮೀಟರ್ ಬಾಯಿಗೆ ಇಟ್ಟು ಪರೀಕ್ಷೆ ಮಾಡಿ. ನಶೆ ಇರುವುದು ಖಚಿತವಾದರೆ ಅವರ ಮಾತುಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ಅವರ ಹೇಳಿಕೆಗೆ ದಾಖಲೆ ಕೇಳಿ. ನನ್ನ ಸವಾಲಿಗೆ ಅವರು ದಾಖಲೆ ಒದಗಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ಸಿದ್ಧನಿದ್ದೇನೆ ಎಂಬುದಾಗಿ ಸುದ್ದಿಗಾರರಿಗೇ ಸಲಹೆ ನೀಡಿದರು.

ಕುಮಾರಣ್ಣ ಅವರ ಪತ್ನಿ ಅನಿತಕ್ಕಾ ಅವರು ಸಂಸ್ಕಾರವಂತೆ ಅವರು ಸಿಕ್ಕಿದಾಗ ಕೈ ಮುಗಿದು ಮಾತನಾಡಿಸುತ್ತೇನೆ. ಭವಾನಿ ಅಕ್ಕ ಅವರನ್ನೂ ಗೌರವದಿಂದಲೇ ಮಾತನಾಡಿಸುತ್ತೇನೆ. ಮುಂದೆ ಅವರು ಸಿಕ್ಕಾಗ ಯಾಕೆ ಈ ರೀತಿ ನನ್ನ ಕುಟುಂಬದ ಬಗ್ಗೆ ಮತನಾಡಿದ್ದೀರಾ ಎಂಬುದಾಗಿ ನೇರವಾಗಿಯೇ ಕೇಳುತ್ತೇನೆ ಎಂದರು.

ರಾಜಕೀಯ ಚಟುವಟಿಕೆಗಳಿಗೆ ನಾನು ಎಲ್ಲಿ ಹೋದರೂ ಒಬ್ಬನೇ ಹೋಗುತ್ತೇನೆ. ನನ್ನ ಕುಟುಂಬವನ್ನು ಕರೆ ತರುವುದಿಲ್ಲ. ಅಷ್ಟರಮಟ್ಟಿಗೆ ನನ್ನ ಕುಟುಂಬವನ್ನು ನನ್ನ ರಾಜಕೀಯ ಚಟುವಟಿಕೆಯಿಂದ ಹೊರಗಿಟ್ಟಿದ್ದೇನೆ. ಆದರೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವವರ ಕುಟುಂಬ ಏನು ಮಾಡುತ್ತಿದೆ ಎಂಬುದನ್ನು ಹೇಳಲಿ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net