‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಸಂಭ್ರಮದ ಮುನ್ನುಡಿ

mysore
Published on
ಮೈಸೂರು: ವರ್ಣರಂಜಿತ ರಂಗ ಹಬ್ಬ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ಕ್ಕೆ ಬೀದಿ ನಾಟಕ ಪ್ರದರ್ಶನ, ಚಿತ್ರಕಲಾ ಶಿಬಿರದೊಂದಿಗೆ ಶನಿವಾರ ಮುನ್ನುಡಿ ಬರೆಯಲಾಯಿತು.

ಆರು ದಿನಗಳ ಕಾಲ ನಡೆಯುವ ‘ಬಹುರೂಪಿ’ಗೆ ಜ.14ಕ್ಕೆ ಅಂಕದ ಪರದೆ ತೆರೆದುಕೊಳ್ಳಲಿದೆ. ಅದರ ಪೂರ್ವಭಾವಿಯಂತೆ ಉಭಯ ಚಟುವಟಿಕೆಗೆ ಶನಿವಾರ ಚಾಲನೆ ದೊರೆಯಿತು.

ಚಿಕ್ಕಗಡಿಯಾರ ವೃತ್ತದಲ್ಲಿ ಬೆಳಗ್ಗೆ ಬೀದಿ ನಾಟಕ ಪ್ರದರ್ಶನಕ್ಕೆ ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಶುಭಕೋರಿದರು.

ಬಳಿಕ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಮೂರು ದಿನಗಳ ಚಿತ್ರಕಲಾ ಶಿಬಿರ ಶುರುವಾಯಿತು. ಚಿತ್ರ ಬಿಡಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದ ಚಿತ್ರಕಲಾವಿದ ಎಸ್.ವಿಷ್ಣುಕುಮಾರ್, ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬಿಡುಗಡೆಯಾಗಬೇಕಿದೆ. ಈ ಸಲದ ‘ಬಹುರೂಪಿ’ ಆಶಯ ಬಿಡುಗಡೆಯೇ ಆಗಿದೆ ಎಂದರು.

ರಂಗಭೂಮಿ ಮತ್ತು ಚಿತ್ರಕಲೆಯನ್ನು ಜೋಡಿಸುವ ಕೆಲಸವಾಗಬೇಕಿದೆ. ನಾಟಕಗಳಿಗೆ ಅನೇಕ ಚಿತ್ರಕಲಾವಿದರು ರಂಗವಿನ್ಯಾಸ ಮಾಡುತ್ತಿದ್ದಾರೆ. ಇವರ ಸಂಖ್ಯೆ ಬಹಳ ಕಡಿಮೆ ಇದೆ. ಇವರಿಗೆಲ್ಲ ಉತ್ತೇಜಿಸಿ, ಇನ್ನಷ್ಟು ಚಿತ್ರಕಲಾವಿದರು ಈ ಕ್ಷೇತ್ರದತ್ತ ಆಕರ್ಷಿಸಲು ರಂಗಭೂಮಿ ಮತ್ತು ಚಿತ್ರಕಲೆಯ ಕಾರ್ಯಾಗಾರವನ್ನು ರಂಗಾಯಣದ ಮೂಲಕ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾವಿದರು ಬಿಡಿ ಬಿಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಾಂಸ್ಕೃತಿಕ ಕ್ಷೇತ್ರದ ಸ್ಪರ್ಶ ಕೊಡಬೇಕಿದೆ. ಅದಕ್ಕಾಗಿ ಚಿತ್ರಕಲೆ-ಸಾಹಿತ್ಯ, ಚಿತ್ರಕಲೆ-ಸಂಗೀತ, ಚಿತ್ರಕಲೆ-ರಂಗಭೂಮಿ ಹೀಗೆ ಒಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿಕೊಡಬೇಕಿದೆ ಎಂದರು.

ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಡೀನ್ ಎ.ದೇವರಾಜು ಮಾತನಾಡಿ, ‘ಬಿಡುಗಡೆ’ ಎಂಬುದು ಮನಸ್ಥಿತಿ. ಶಿಕ್ಷಣ, ಫ್ರೌಡಿಮೆ, ವಿದ್ವತ್ತು ಇದರಿಂದ ಮುಕ್ತವಾಗುವ ರಹದಾರಿ. ಆದರೆ, ಸನ್ನಿವೇಶ, ಪರಿಸ್ಥಿತಿ, ಕೆಲ ಸಂಗತಿಗಳಲ್ಲಿ ನಾವೆಲ್ಲ ಬಂಧನಕ್ಕೆ ಒಳಗಾಗಿದ್ದು, ಇದರಿಂದ ಹೊರಬರಲು ಛಲ, ಹಂಬಲ, ತುಡಿತದ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.

ಅಸಮಾನತೆಯ ವ್ಯವಸ್ಥೆಯಿಂದ ಬಿಡುಗಡೆಯಾಗಬೇಕಿದೆ. ಬಂಧನದಲ್ಲಿ ಸಿಲುಕಿಕೊಳ್ಳುವುದು ನಾವೇ. ಅದರಿಂದ ಹೊರ ಬರಲು ತವಕಿಸುವುದು ನಾವೇ. ವಿಶಾಲ ಮನೋಭಾವ, ಭಾತೃತ್ವ ಬೆಳೆಸಿಕೊಳ್ಳಬೇಕು. ಸ್ವಸ್ಥ ಸಮಾಜ, ಆರೋಗ್ಯ ಸಮಾಜ ರೂಪಿಸಿಕೊಳ್ಳಬೇಕಿದೆ. ಸಹಬಾಳ್ವೆಯಿಂದ ನಾವೆಲ್ಲ ಬಿಡುಗಡೆಯಾಗಬಹುದು ಎಂದು ವಿಶ್ಲೇಷಿಸಿದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಚಿತ್ರಕಲೆ ಮತ್ತು ರಂಗಭೂಮಿಗೂ ಅವಿನಾಭಾವ ಸಂಬಂಧ. ಉಭಯ ಕಲೆಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಚಿತ್ರಕಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾವಾ ಸೇರಿದಂತೆ ಇನ್ನಿತರ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳು ಮೂರು ದಿನಗಳ ಕಾಲ ರಂಗಾಯಣವನ್ನು ಚಿತ್ರಕಲೆಯ ಮೂಲಕ ವಿನ್ಯಾಸಗೊಳಿಸಿ ‘ಬಹುರೂಪಿ’ಗೆ ಸಜ್ಜುಗೊಳಿಸಲಿದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net