ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ

13 ckm 3
ಚಿಕ್ಕಮಗಳೂರಿನ ರೋಟರಿಕ್ಲಬ್‌ನಿಂದ ಎಂಎಲ್‌ವಿ.ರೋಟರಿ ಸಭಾಂಗಣದಲ್ಲಿ ಐದು ದಿನಗಳ ಕಾಲ ಆಯೋಜಿಸಿದ್ದ ಯುವಚೇತನ ೨೦೨೪-೨೫ರ ಸಮಾರೋಪ ಸಮಾರಂಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು. ಡಾ.ಬೆಳವಾಡಿ ಮಂಜುನಾಥ್, ಎಂ.ಎಲ್.ಸುಜಿತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಹುಮಾನ ಗಳಿಸುವುದಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ. ಸ್ಪರ್ಧಾ ಮನೋಭಾವ ಬದುಕಿನಲ್ಲಿ ಉಪಯುಕ್ತ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ರೋಟರಿಕ್ಲಬ್‌ನಿಂದ ಎಂಎಲ್‌ವಿ.ರೋಟರಿ ಸಭಾಂಗಣದಲ್ಲಿ ಐದು ದಿನಗಳ ಕಾಲ ಆಯೋಜಿಸಿದ್ದ ಯುವಚೇತನ ೨೦೨೪-೨೫ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿ ಯುವಜನರಲ್ಲಿ ಅಪಾರ ಪ್ರತಿಭೆ, ಶಕ್ತಿ, ಸಾಮರ್ಥ್ಯ ಇರುತ್ತದೆ. ವಿಶೇಷತೆಗಳನ್ನು ಗುರುತಿಸಿ, ಗೌರವಿಸಿ ಪ್ರೋತ್ಸಾಹಿಸಿದಾಗ ಅವರಿಂದ ಮಹತ್ವದ ಸಾಧನೆ-ಕೊಡುಗೆ ನಿರೀಕ್ಷಿಸಬಹುದು. ಸಾಮರ್ಥ್ಯವನ್ನು ಗುರುತಿಸಲು ಇಂತಹ ಸ್ಪರ್ಧೆಗಳು ಉಪಯುಕ್ತ. ಬಹುಮಾನಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯ. ಈ ಬಾರಿ ಬಹುಮಾನ ಬಾರದವರು ಕೊರತೆಗಳನ್ನು ಗಮನಿಸಿ ಸರಿಪಡಿಸಿಕೊಂಡು ಮುನ್ನಡೆದರೆ ಮುಂದಿನ ದಿನಗಳಲ್ಲಿ ಜಯ ಖಚಿತ. ತಾಳ್ಮೆ, ಸಹನೆ, ನಿರಂತರ ಪ್ರಯತ್ನ, ಪರಿಶ್ರಮ ಯಶಸ್ಸನ್ನು ತಂದು ಕೊಡುತ್ತದೆ ಎಂದರು.

ಸಮಾರೋಪ ಭಾಷಣ ಮಾಡಿದ ಸಾಹಿತಿ ಡಾ. ಬೆಳವಾಡಿ ಮಂಜುನಾಥ್, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನೊಳಗೊಂಡ ಯುವಚೇತನ ಸಪ್ತಾಹ ಸಹಕಾರಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಯುವಕರಲ್ಲಿ ವಿಶೇಷ ಸಾಮರ್ಥ್ಯವಿರುತ್ತದೆ. ಕಲಿಕೆ ಮತ್ತು ಸಾಧನೆಗೆ ತಾರುಣ್ಯದಲ್ಲಿ ಅವಕಾಶವಿದೆ. ಅತಿಹೆಚ್ಚು ಭಾಷೆಗಳನ್ನು ಕಲಿಯುವ ಸಾಮರ್ಥ್ಯವು ಯುವಕರಲ್ಲಿದೆ. ರೋಟರಿ ಸಂಸ್ಥೆ ಉತ್ತಮ ವೇದಿಕೆಯನ್ನು ನೀಡಿದ್ದು ಸದ್ಭಳಕೆ ಮಾಡಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ರೋಟರಿ ಪಾತ್ರ ಗಣನೀಯ. ಪೋಲಿಯೋ ಮಹಾಮಾರಿ ನಿರ್ಮೂಲನೆಯಲ್ಲಿ ರೋಟರಿ ಶ್ರಮಿಸಿದೆ. ಜೀವನಸಂಧ್ಯಾ ವೃದ್ಧಾಶ್ರಮ ಸೇವಾ ಕಾರ್ಯಕ್ಕೊಂದು ಮಾದರಿ ಎಂದರು.

ಸ್ಪರ್ಧಾ ವಿಜೇತರಿಗೆ ರೋಟರಿ ರhÆನ್-೭ರ ನಾಯಕ ಜಿ.ಎಲ್.ವೆಂಕಟೇಶಮೂರ್ತಿ ಸೇರಿದಂತೆ ರೋಟರಿ ಪದಾಧಿಕಾರಿಗಳು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ವಹಿಸಿದ್ದರು. ಕಾರ್ಯದರ್ಶಿ ಎನ್.ಪಿ.ಲಿಖತ್, ಯುವಚೇತನದ ಸಪ್ತಾಹದ ಛೇರ್ಮನ್ ಫಣೀಂದ್ರ ನಾಡಿಗ್ ಉಪಸ್ಥಿತರಿದ್ದರು. ಇದೇ ವೇಳೆ ಸಾಯಿಏಂಜೆಲ್ಸ್ ಮತ್ತು ಟಿಎಂಎಸ್ ಶಾಲಾ ತಂಡಗಳ ನೃತ್ಯ ಪ್ರದರ್ಶನ ಗಮನಸೆಳೆಯಿತು. ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಶ್ರೀಸಾಯಿ ಏಂಜೆಲ್ಸ್ ತಂಡ ತನ್ನದಾಗಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net