ಬಹುಮತದಿಂದ ಆರ್.ನರೇಂದ್ರರನ್ನು ಗೆಲ್ಲಿಸಿ

05 HANUR 1
ಹನೂರಿನಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರ ಸಭೆ ನಡೆಯಿತು. ಪುಟ್ಟರಾಜು, ರವೀಂದ್ರ, ಪ್ರಭು, ಸಿದ್ದರಾಜು ಸಂಪತ್‌ಕುಮಾರ್ ಇದ್ದರು.
Published on

ಹನೂರು: ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಬೆಂಬಲಿಸುವುದರ ಮೂಲಕ ಶಾಸಕ ಆರ್.ನರೇಂದ್ರ ಅವರನ್ನು ಹೆಚ್ಚಿನ ಮತದ ಅಂತರದಿಂದ ಗೆಲ್ಲಿಸುವಂತೆ ಕಂಠೀರವ ಸ್ಟುಡಿಯೋ ಮಾಜಿ ನಿರ್ದೇಶಕ ಮಂಗಲ ಪುಟ್ಟರಾಜು ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ ಮುಸ್ಲಿಂ ಮೀಸಲಾತಿ ಕಡಿತಗೊಳಿಸಿ ಅನ್ಯಾಯವೆಸಗಿದೆ. ಈ ದಿಸೆಯಲ್ಲಿ ಎಲ್ಲೆಡೆ ಕಾಂಗ್ರೆಸ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ. ಜತೆಗೆ ಸಮುದಾಯದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಇವರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಸಬೇಕು. ಈ ಮೂಲಕ ಹನೂರು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ತಿಳಿಸಿದರು.

ಯುವ ಮುಖಂಡ ರವೀಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ದೀನ, ದಲಿತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಸರ್ಕಾರ ಸಮುದಾಯವನ್ನು ಹತ್ತಿಕ್ಕುವಂತಹ ಕೆಲಸ ಮಾಡುತ್ತಿದೆ. ಹಾಗಾಗಿ ಪರಿಶಿಷ್ಟ ಜಾತಿ ಸಮುದಾಯ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯದ ಮತದಾರರು ಶಾಸಕ ಆರ್.ನರೇಂದ್ರ ಅವರನ್ನು ಗೆಲ್ಲಿಸುವುದರ ಮೂಲಕ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಪಪಂ ಸದಸ್ಯ ಸಂಪತ್‌ಕುಮಾರ್, ಗ್ರಾಪಂ ಸದಸ್ಯ ಸಿ.ಪ್ರಭು, ತಾಪಂ ಮಾಜಿ ಅಧ್ಯಕ್ಷ ರಾಜೇಂದ್ರ, ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಸಿದ್ದರಾಜು, ಮುಖಂಡರಾದ ಪುಟ್ಟರಾಜು, ಸಕ್ಕರ್ ದೇವನ್, ಬಸವಣ್ಣ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net