

ಚಿತ್ರದುರ್ಗ: ಗಂಡಾಗಲಿ, ಹೆಣ್ಣಾಗಲಿ ಮನೆಗೊಂದು ಮಗು ಸಾಕು. ಆ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಚಿಕ್ಕ ಕುಟುಂಬದ ಆದರ್ಶ ಪಾಲಿಸಿ. ಇದರಿಂದ ಆರ್ಥಿಕ ಹೊರೆ ಕಡಿಮೆಯಾಗಿ ದೇಶದ ಹಿತವನ್ನು ಕಾಪಾಡಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ತುರುವನೂರು ಗ್ರಾಮದಲ್ಲಿ ಗುರುವಾರ ದಂಪತಿ ಸಂಪರ್ಕ ಪಾಕ್ಷಿಕ ಕಾರ್ಯಕ್ರಮದಡಿ ಬಹುಮಕ್ಕಳ ತಾಯಂದಿರ ಮನೆಗಳಿಗೆ ಭೇಟಿ ನೀಡಿ, ಕುಟುಂಬ ಯೋಜನೆ ಕುರಿತು ಅರಿವು ಮೂಡಿಸುವ ವೇಳೆ ಮಾತನಾಡಿದರು.
ಮೇಲಿಂದ ಮೇಲೆ ಮಗುವಿಗೆ ಜನನ ನೀಡುವುದರಿಂದ ತಾಯಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಮಕ್ಕಳ ಬೆಳವಣಿಗೆ ಕೂಡ ಕುಂಠಿತವಾಗಲಿದೆ. ಇದರಿಂದಾಗಿ ಕುಟುಂಬದ ಆರ್ಥಿಕತೆ ಕ್ಷೀಣಿಸಲಿದೆ ಎಂದರು.
ಒಂದರಿಂದ ಇನ್ನೊಂದು ಮಗು ಪಡೆಯಲು ಕನಿಷ್ಠ 3 ವರ್ಷವಾದರೂ ಅಂತರ ಇರಬೇಕು. ಇಲ್ಲದಿದ್ದಲ್ಲಿ ರಕ್ತಹೀನತೆ, ಇತರೆ ಅನಾರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ತಾಯಿ ಮತ್ತು ಮಕ್ಕಳ ಮರಣ ಸಂಖ್ಯೆ ತಗ್ಗಿಸಲು ಕುಟುಂಬ ಯೋಜನೆಯೊಂದೇ ಉತ್ತಮ ಮಾರ್ಗ ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ತಿಮ್ಮಣ್ಣ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ರೇಣುಕಮ್ಮ, ಕಲ್ಪನಾ, ಮಮತಾ, ಆಶಾ ಕಾರ್ಯಕರ್ತೆಯರು ಇದ್ದರು.