ಬಹುಭಾಷ ಪಂಡಿತ ಪ್ರೊ.ಎಂ.ಕರಿಮುದ್ದೀನ್ ನಿಧನ

SRP_-02Srp Pro.Karimudddin(95)-03
ಬಹುಭಾಷ ಪಂಡಿತ ಪ್ರೊ.ಎಂ.ಕರಿಮುದ್ದೀನ್ ನಿಧನ
Published on

ಶ್ರೀರಂಗಪಟ್ಟಣ: ಹಿರಿಯ ಸಾಹಿತಿ, ಇತಿಹಾಸ ತಜ್ಞ ಹಾಗೂ ಬಹುಭಾಷ ಪಂಡಿತರೆಂದೇ ಖ್ಯಾತಿಯಾಗಿದ್ದ ಪ್ರೊ.ಎಂ.ಕರಿಮುದ್ದೀನ್(95) ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಮುಂಜಾನೆ ನಿಧನರಾದರು.

ಪಟ್ಟಣ ಸಮೀಪದ ಗಂಜಾಂನ ನಿವಾಸದಲ್ಲಿ ತಮ್ಮ ಅಣ್ಣನ ಮಕ್ಕಳೊಂದಿಗೆ ವಾಸವಿದ್ದ ಕರಿಮುದ್ದೀನ್ ಅವರು ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದು, ಶನಿವಾರ ಮುಂಜಾನೆ 3.30ರ ವೇಳೆ ಅಸ್ತಂಗತರಾಗಿದ್ದಾರೆ.

1932 ಜೂ.5ರಲ್ಲಿ ತಂದೆ ಅಬ್ದುಲ್‌ಅಲಿ ಹಾಗೂ ತಾಯಿ ರಹೀಮ್ ಉನ್ನೀಸಾ ಬೇಗಂ ಅವರಿಗೆ ಜನಿಸಿದ ಪ್ರೊ.ಕರಿಮುದ್ದೀನ್ ಅವರು ಸಾಹಿತಿ ಹಾಗೂ ಪುಸ್ತಕ ಪ್ರೇಮಿಯಾಗಿ ಕನ್ನಡ, ಇಂಗ್ಲೀಷ್, ಸಂಸ್ಕೃತ, ಪರ್ಶಿಯನ್, ಉರ್ದು, ಅರೇಬಿಕ್ ಪಾರ್ಸಿ ಸೇರಿದಂತೆ ಇತರ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿ ನಿರರ್ಗಳ ಭಾಷಾ ಹಿಡಿತ ಹೊಂದಿದ್ದರು. ರಾಷ್ಟ್ರಕವಿ ಕುವೆಂಪು, ತೀನಂಶ್ರೀ, ಡಿ.ಎಲ್.ನರಸಿಂಹಮೂರ್ತಿ, ಕಾವೆಂ ರಾಘವಚಾರ್ಯ ಸೇರಿದಂತೆ ಹಲವು ಸಾಹಿತಿಗಳ ಗರಡಿಯಲ್ಲಿ ಪಳಗಿ ಮಂಡ್ಯ ಹಾಗೂ ಮಡಿಕೇರಿ ಸರ್ಕಾರಿ ಕಾಲೇಜು ಸೇರಿದಂತೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕವೂ ಎಂಟಿಡಿಬಿ, ಓಂಶ್ರೀನಿಕೇತನ ಹಾಗೂ ಗಂಜಾಂನ ದಾರುಲ್ ಉಮರ್ ಉಮರ್ ಮುಸ್ಲಿಂ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.

ಅವಿವಾಹಿತರಾಗಿದ್ದ ಪ್ರೊ.ಎಂ.ಕರಿಮುದ್ದೀನ್ ಅವರು ಜಗತ್ತಿನ ಅನೇಕ ಧರ್ಮ ಗ್ರಂಥಗಳನ್ನು ಓದುವ ಜತೆಗೆ ಅದರ ಅರ್ಥವನ್ನು ಪರಿಪೂರ್ಣವಾಗಿ ಕರಗತಗೊಳಿಸಿಕೊಂಡಿದ್ದರು. ಹಿಂದು, ಇಸ್ಲಾಂ, ಕ್ರೈಸ್ತ ಎಲ್ಲವೂ ಒಂದು ಮತ, ನಂಬಿಕೆ, ಮಾನವ ಜನಾಂಗದಲ್ಲಿ ವೈವಿಧ್ಯ. ಅವುಗಳಲ್ಲಿ ನಾವು ಏಕತೆ ಕಾಣಬೇಕು. ಎಲ್ಲ ಧರ್ಮಗಳಲ್ಲಿನ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ವಿಶ್ವ ಮಾನವರಾಗಿ ಬದುಕಬೇಕು, ಮಕ್ಕಳಿಗೆ ಬಾಲ್ಯದಿಂದಲೇ ಕಡ್ಡಾಯವಾಗಿ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂಬ ಆಶಯ ಹೊಂದಿದ್ದರು. ಹೀಗಾಗಿ ಅವರು ಮುಸ್ಲಿಮರಾದರೂ ತಮ್ಮ ಧರ್ಮದ ಯಾವ ನಿಯಮವನ್ನೂ ಪಾಲಿಸದೆ ಶಿಶುನಾಳ ಷರೀಫರಂತೆ ಸೂಫಿ ಪರಂಪರೆಯಲ್ಲಿ ನಂಬಿಕೆ ಹೊಂದಿದ ಅವರು, ವಿಶ್ವ ಮಾನವನಂತೆಯೇ ತಮ್ಮ ಬದುಕಿನ ಕೊನೆಯವರೆಗೂ ಪಾಲನೆ ಮಾಡಿದ್ದಾರೆ.

ಓಶೋ ಅನುಯಾಯಿ ಆಗಿದ್ದ ಪ್ರೋ.ಕರಿಮುದ್ದೀನ್ ರಜನೀಶ್ ಅವರ ಪ್ರತಿಯೊಂದು ಪುಸ್ತಕಗಳ ಬರಹಗಳನ್ನು ಅಚ್ಚಿಕೊಂಡಿದ್ದರು. ಓರ್ವ ಸಾಹಿತಿಯಾಗಿ ಸಂಚಿತಾ ಚಿಂತನಾ, ಬಾಳು ಬದುಕು ಎಂಬ ಪುಸ್ತಕಗಳನ್ನು ಪ್ರಕಟಗೊಳಿಸಿದ್ದು, ಅನಾಥ ಮುಸ್ಲಿಮರು ಎಂಬ ಪುಸ್ತಕ ಸಮಾಜದ ಪ್ರಚಲಿತಕ್ಕೆ ಸಿಗಲಿಲ್ಲ. ಇವರ ಹಲವು ಪ್ರಸಿದ್ಧ ಭಾಷಣಗಳು ಮೈಸೂರು ಆಕಾಶವಾಣಿಯಲ್ಲಿ ಚಿಂತನಾ ಎಂಬ ಕಾರ್ಯಕ್ರಮದಲ್ಲಿ ಬಿತ್ತರಗೊಂಡಿತ್ತು. ಇಷ್ಟಲ್ಲದೆ ಪ್ರೊ.ಕರಿಮುದ್ದೀನ್ ಅವರ ಹಲವು ಲೇಖನಗಳು ವಿವಿಧ ವೃತ್ತ, ವಾರ ಹಾಗೂ ಸಂಚಿಕೆ ಪತ್ರಿಕೆಗಳಲ್ಲೂ ಪ್ರಕಟವಾಗಿವೆ.

ಇವರ ಪಾಂಡಿತ್ಯಕ್ಕೆ ಜಿಲ್ಲಾ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ ಹಾಗೂ ಒಲಿದು ಬಂದ ಹಲವು ಅಧಿಕಾರಗಳಿಂದಲೇ ದೂರ ಉಳಿದಿದ್ದರು. ಇವರು ಸಾಹಿತ್ಯ ಲೋಕದಲ್ಲಿ ಅಪಾರ ಶ್ರೀಮಂತಿಕೆಯ ಅಭಿಮಾನವನ್ನು ಗಳಿಸಿ ಸಾಮಾನ್ಯ ಹಾಗೂ ಸರಳ ಬದುಕಿನಲ್ಲೇ ತಮ್ಮ ಬದುಕಿನ ಪಯಣದ ಅರ್ಥಪೂರ್ಣ ಯಾತ್ರೆಯನ್ನು ಶನಿವಾರ ಕೊನೆಗೊಳಿಸಿದ್ದಾರೆ.

ಪ್ರೊ.ಕರಿಮುದ್ದೀನ್ ಅವರ ಅಗಲಿಕೆಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಹಿರಿಯ ಮುಖಂಡ ಎಂ.ಪುಟ್ಟೇಗೌಡ, ಜನಪ್ರತಿನಿಧಿಗಳು, ಇತಿಹಾಸ ತಜ್ಞರು, ಸಾಹಿತಿಗಳು, ಚಿಂತಕರು, ಗಾಂಧಿವಾದಿಗಳು, ಅವರ ಶಿಷ್ಯವೃಂದ ಸಂತಾಪ ಸೂಚಿಸಿದೆ. ಬೆಂಗಳೂರು, ಮಂಡ್ಯ, ಶ್ರೀೀರಂಗಪಟ್ಟಣ ಮತ್ತು ಗಂಜಾಂನ ಸೇರಿದಂತೆ ತಾಲೂಕಿನ ಇತರೆಡೆ ಜನರು ಅಂತಿಮ ಕಾರ್ಯದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net