ಬಹುದಿನಗಳ ಬೇಡಿಕೆ ಈಡೇರಿಕೆ

aurad
Published on

ಔರಾದ್: ಔರಾದ್-ಬೀದರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶನಿವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ವರ್ಚುವಲ್ ಮೂಲಕ ಚಾಲನೆ ನೀಡಿದ ನಿಮಿತ್ತ ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಹೆದ್ದಾರಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಚವ್ಹಾಣ್, ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಹೆದ್ದಾರಿ ಕಾಮಗಾರಿ ಕೆಲ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಸಮಸ್ಯೆ ಬಗೆಹರಿದ ನಂತರ ಔರಾದ್-ಬೀದರ್ ಹಾಗೂ ಬೀದರ್-ಹುಮನಾಬಾದ್ ಹೆದ್ದಾರಿ ಕೆಲಸಕ್ಕೆ ಚಾಲನೆ ನೀಡಿ ಅಭಿವೃದ್ಧಿಗೆ ಸರ್ಕಾರ ನಾಂದಿ ಹಾಡಿದೆ ಎಂದರು.

ರೈಲ್ವೆ ಮಾರ್ಗ ಸೇರಿ ತಾಲೂಕಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತಲಿವೆ. ಇದರಿಂದ ಗುಳೆ ಹೋಗುವವರಿಗೆ ತವರು ಕ್ಷೇತ್ರದಲ್ಲೇ ಕೆಲಸ ನೀಡಿದಂತಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಹೇಳಿದರು.

ಜಿಪಂ ಸದಸ್ಯ ಮಾರುತಿ ಚವ್ಹಾಣ್, ಪಪಂ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ್, ಉಪಾಧ್ಯಕ್ಷ ಸಂತೋಷ ಪೋಕಲವಾರ್, ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಎಪಿಎಂಸಿ ಅಧ್ಯಕ್ಷ ರಮೇಶ ಉಪಾಸೆ, ಪ್ರಮುಖರಾದ ರಮೇಶ ದೇವಕತ್ತೆ, ಶ್ರೀನಿವಾಸ ಖೂಬಾ, ಶರಣಪ್ಪ ಪಂಚಾಕ್ಷರಿ, ಸಂದೀಪ ಪಾಟೀಲ್, ಖಂಡೋಬಾ ಕಂಗಟೆ ಇತರರಿದ್ದರು. ಸಾರ್ವಜನಿಕರ ವೀಕ್ಷಣೆಗಾಗಿ ಕನ್ನಡಾಂಬೆ ವೃತ್ತ ಮತ್ತು ಬಸವೇಶ್ವರ ವೃತ್ತದಲ್ಲಿ ದೊಡ್ಡ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net