ಬಹುತ್ವದಿಂದ ಅದ್ಭುತ ಸಾಹಿತ್ಯ ಸೃಷ್ಟಿ: ಡಾ.ರಹಮತ್ ತರೀಕೆರೆ

mysore
Published on

ಮೈಸೂರು: ಬಹುತ್ವವೇ ದೇಶದ ಗುಟ್ಟಾಗಿದ್ದು, ಬಹುತ್ವದಿಂದ ಮಾತ್ರ ಅದ್ಭುತ ಸಾಹಿತ್ಯ ಸೃಷ್ಟಿಯಾಗಿದೆ ಎಂದು ವಿದ್ವಾಂಸ ಡಾ.ರಹಮತ್ ತರೀಕೆರೆ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ 52ನೇ ಕನ್ನಡ ಪುನಶ್ಚೇತನ ಶಿಬಿರದಲ್ಲಿ ಮಂಗಳವಾರ ಮಾತನಾಡಿ, ಬಹುತ್ವದಿಂದಲೇ ಶ್ರೇಷ್ಠ ಕಾವ್ಯಗಳು ಹುಟ್ಟಿಕೊಂಡಿವೆ ಎಂದರು.

ಬಳ್ಳಿಯ ಹೂ, ದುಂಬಿ, ಮರದಲ್ಲಿ ಬಿಟ್ಟಿರುವ ಕಾಯಿ, ಬೀಜಗಳಿಂದ ಕೋತಿ, ಪಕ್ಷಿಗಳು ಹೊಸ ಪರಿಸರದ ಬಹುತ್ವವನ್ನು ಸೃಷ್ಟಿ ಮಾಡುತ್ತವೆ.

ಇದರಲ್ಲಿ ಒಂದು ಇಲ್ಲವಾದರೂ ಇಡೀ ಪರಿಸರ ವ್ಯವಸ್ಥೆಯೇ ನಾಶವಾಗುತ್ತದೆ. ಈ ಲೋಕದಲ್ಲಿ ಕೇವಲ ಮನುಷ್ಯ ಬದುಕಲು ಹಕ್ಕಿಲ್ಲ. ಪ್ರತಿಯೊಂದು ಜೀವಿಗೂ ಹಕ್ಕಿದೆ ಎಂದರು.

ಬಹುತ್ವದ ಪ್ರಮುಖ ಲಕ್ಷಣವೇ ಹೊಂದಾಣಿಕೆ. ವೈವಿಧ್ಯದಲ್ಲಿ ಪರಸ್ಪರ ಬೆರೆಯುವುದು ಈ ದೇಶದ ಗುಟ್ಟು. ಇಂಗ್ಲಿಷ್ ಗೀತೆಗಳು ಕನ್ನಡದ ಯಶಸ್ವಿ ಕಾವ್ಯ ಸಂಕಲನವಾಗಿ ಹೊಸಗನ್ನಡ ಕಾವ್ಯಕ್ಕೆ ಹೊಸ ಹಾದಿಯನ್ನು ಹಾಕಿಕೊಟ್ಟಿತು ಎಂದರು.

ಎಲ್ಲ ಅದ್ವೈತ ಕವಿಗಳು ಬಹುತ್ವವಾದಿಗಳು. ಸಮರಸವೇ ಜೀವನ. ಇಡೀ ಭಾರತದ ಅತ್ಯುತ್ತಮವಾದ ಸಂಗೀತ, ಸಾಹಿತ್ಯ, ಭಾಷೆಗಳನ್ನು ಹಾಗೂ ವ್ಯಕ್ತಿತ್ವಗಳೊಂದಿಗೆ ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು.

ಇದರ ಉದ್ದೇಶವೇ ಅರ್ಥಪೂರ್ಣವಾದ ಬೆರೆಯುವಿಕೆ. ಇಂತಹ ಬೆರೆಯುವಿಕೆಯಿಂದಲೇ ಶ್ರೇಷ್ಠ ಸಾಹಿತ್ಯ ಹುಟ್ಟಿದ್ದು ಎಂದು ಹೇಳಿದರು.

ಈ ದೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ದೇಶವನ್ನು ಕಟ್ಟುವುದಕ್ಕೆ, ನಾಡನ್ನು ಕಟ್ಟುವುದಕ್ಕೆ, ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ರೂಪಾಂತರಿ ಬಹುತ್ವವೇ ಕಾರಣ. ಉರ್ದು ಭಾಷೆಗೆ 300 ವರ್ಷಗಳ ಇತಿಹಾಸವಿದೆ.

ಟರ್ಕಿ ಭಾಷೆಯಲ್ಲಿ ಉರ್ದು ಪದದ ಅರ್ಥ ಸೈನ್ಯದ ಪಾಳ್ಯ. ಅಂದರೆ ಉರ್ದು ಭಾಷೆಯು ಸೈನಿಕರ ಪಾಳಯದಲ್ಲಿ ಹುಟ್ಟಿದ ಭಾಷೆಯಾಗಿದೆ. ಸೈನ್ಯ ಎಂದರೆ ಎಲ್ಲ ಭಾಷೆಯ ಸೈನಿಕರು ಇರುತ್ತಾರೆ. ಹೀಗಾಗಿ, ಅವರು ಪರಸ್ಪರ ಮಾತನಾಡಿಕೊಳ್ಳಲು ಭಾಷೆಗಳನ್ನು ಮಿಶ್ರಗೊಳಿಸಿ ಮಾತನಾಡಿದ್ದರಿಂದ ಹೊಸ ಭಾಷೆ ಹುಟ್ಟಿತು ಎಂದು ಹೇಳಿದರು. ಪ್ರಸಾರಂಗದ ನಿರ್ದೇಶಕ, ಶಿಬಿರದ ಸಂಚಾಲಕ ಡಾ.ನಂಜಯ್ಯ ಎಂ.ಹೊಂಗನೂರು, ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net