

ಕೊಳ್ಳೇಗಾಲ : ನಮ್ಮಲ್ಲಿ ಬಹುತೇಕರಿಗೆ ನಿಜವಾದ ಶಿಕ್ಷಣ ಎಂದರೆ ಏನು ಎಂಬ ಕಲ್ಪನೆಯೇ ಇಲ್ಲ. ಹೀಗಾಗಿ ಕನ್ನಡ ಅಥವಾ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಮಾನಸ ಕಾಲೇಜಿನ ಉಪನ್ಯಾಸಕ ಸೋಮಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಎಂಸಿಕೆಸಿ ಪ್ರೌಢಶಾಲೆಯಲ್ಲಿ ಮಂಗಳವಾರ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಗರಿಷ್ಠ ಅಂಕಗಳನ್ನು ಗಳಿಸಿ ಒಳ್ಳೆಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದು ಹೆಚ್ಚು ಹಣಗಳಿಸಿ ಕೊಡುವ ಉದ್ಯೋಗಗಳಿಗೆ ಸೇರುವುದೇ ಶಿಕ್ಷಣ ಎಂದು ಭಾವಿಸುತ್ತಾರೆ. ಹೀಗಾಗಿ ನಿಜವಾದ ಶಿಕ್ಷಣದ ಬಗ್ಗೆ ತಿಳಿದಿಲ್ಲ. ಇನ್ನು ಕೆಲವರಿಗೆ ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಅಗತ್ಯ ಇರುವುದನ್ನು ಕೊಡುವುದೇ ಶಿಕ್ಷಣ, ಇನ್ನುಳಿದವರಿಗೆ ಏನೋ ಒಂದಷ್ಟು ಓದಿ ಪದವಿ ಪ್ರಮಾಣಪತ್ರ ಪಡೆದುಕೊಳ್ಳುವುದೇ ಶಿಕ್ಷಣ ಎಂದು ತಿಳಿದುಕೊಂಡಿದ್ದಾರೆ. ಒಟ್ಟಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಪದವಿಗಳ ಸಂಪಾದನೆಯೇ ಶಿಕ್ಷಣದ ಅಂತಿಮ ಗುರಿ ಎಂದುಕೊಂಡಿದ್ದಾರೆ ಎಂದು ಹೇಳಿದರು.
ವ್ಯಕ್ತಿಯ ಸುಪ್ತ ಪ್ರತಿಭೆಯನ್ನು ಪ್ರಕಟಪಡಿಸಲು ಅವಕಾಶ ನೀಡಿ, ವ್ಯಕ್ತಿತ್ವವನ್ನು ರೂಪಿಸಿ ಸತ್ಪ್ರಜೆಗಳನ್ನು ಸೃಷ್ಟಿಸುವುದೇ ಶಿಕ್ಷಣ. ಜತೆಗೆ ಹೊಟ್ಟೆಪಾಡಿಗೆ ಬೇಕಾದ ಅರ್ಹತೆಗಳನ್ನೂ ಪಡೆದುಕೊಳ್ಳುತ್ತಾ ಅಂತಃಶಕ್ತಿಯನ್ನು ವಿಕಾಸಗೊಳಿಸಿಕೊಳ್ಳುವ ಒಂದು ಬೌದ್ಧಿಕ, ಮಾನಸಿಕ ಮತ್ತು ದೈಹಿಕ ವ್ಯಾಯಾಮವೇ ಶಿಕ್ಷಣ ಎಂಬ ಜಾಗೃತ ಪ್ರಜ್ಞೆಯ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್ ಮಾತನಾಡಿ, ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವೆಲ್ಲರೂ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆಯೋಣ ಎಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ಎನ್.ವೆಂಕಟೇಶಮೂರ್ತಿ, ಸಹ ಶಿಕ್ಷಕ ಅಮೀತಾನಂದ, ಸುಧಾಕರ, ಸುಶೀಲಮ್ಮ, ಸಿಬ್ಬಂದಿ ಇದ್ದರು.