ಬಹುಜನರೇ ಭಾರತದ ದೇಶದ ಅತಿದೊಡ್ಡ ಆಸ್ತಿ

12 ckm 1
ಚಿಕ್ಕಮಗಳೂರಿನ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸಹೋದರತ್ವ ಸಮಿತಿ ಮಾಸಿಕ ಸಭೆ ಹಾಗೂ ದಾದಾ ಸಾಹೇಬ್ ಕಾನ್ಷಿರಾಮ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಕಾನ್ಷಿರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆ.ಟಿ.ರಾಧಾಕೃಷ್ಣ, ಬಿ.ಕೆ.ಸುಧಾ, ಕೆ.ಎಸ್.ಮಂಜುಳಾ, ಆರ್.ವಸಂತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಹುಜನರು ದೇಶದ ಆಸ್ತಿ. ಭಾರತದ ಬಹುಜನರೇ ದೊಡ್ಡ ಸಮುದಾಯವಾಗಿದ್ದು ಎಲ್ಲರನ್ನೂ ಒಗ್ಗೂಡಿಸಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞೆ ಹೆಚ್ಚಿಸಿದವರು ದಾದಾ ಸಾಹೇಬ್ ಕಾನ್ಷಿರಾಮ್‌ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ತಿಳಿಸಿದರು.

ನಗರದ ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ಜಿಲ್ಲಾ ಸಹೋದರತ್ವ ಸಮಿತಿ ಮಾಸಿಕ ಸಭೆ ಹಾಗೂ ದಾದಾ ಸಾಹೇಬ್ ಕಾನ್ಷಿರಾಮ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬಹುಜನರಿಗೆ ರಾಜಕೀಯ ಪ್ರಜ್ಞೆ ಹೆಚ್ಚಿಸಿದ ಕಾನ್ಷಿರಾಮ್ ಸ್ಮರಣೀಯ. ದೇಶಾಡಳಿತ ನಡೆಸುವ ಮಾರ್ಗ ತೋರಿದ ರಾಜಕೀಯ ದಾರ್ಶನಿಕ ಕಾನ್ಷಿರಾಮ್ ಅವರನ್ನು ಮರೆಯಲಾಗದು. ಮನುವಾದಿಗಳು ದೇಶವನ್ನು ಆಳುತ್ತಾ ಬಹುಜನರನ್ನು ತುಳಿಯುತ್ತಿದ್ದಾರೆ. ಹೀಗಾಗಿ ಬಹುಜನರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಬೇಕಿದೆ ಎಂದು ಪ್ರತಿಪಾದಿಸಿದವರು ಕಾನ್ಷಿರಾಮ್ ಎಂದು ಹೇಳಿದರು.

ಅಸ್ಪÊಷ್ಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಆಳುವ ವರ್ಗದವರನ್ನಾಗಿ ಮಾಡಿದ ಶ್ರೇಯಸ್ಸು ಕಾನ್ಷಿರಾಮ್ ಅವರಿಗೆ ಸಲ್ಲುತ್ತದೆ. ಅಲ್ಲದೇ ಮಾಯಾವತಿ ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ಉತ್ತರ ಪ್ರದೇಶದಲ್ಲಿ ಬಡವರಿಗೆ ಭೂಮಿ, ಸಾಲ ಸೌಲಭ್ಯ ಕಲ್ಪಿಸಿದವರು ಕಾನ್ಷಿರಾಮ್ ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದು ಕೊಂಡಿರುವ ಪುರೋಹಿತಶಾಹಿ ವ್ಯವಸ್ಥೆಯನ್ನು ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ಕಾನ್ಷಿರಾಮ್ ಗುರಿಯಾಗಿತ್ತು. ಶೋಷಿತ ಸಮಾಜವು ಆಳುವ ಸಮಾಜವಾಗುವುದರಿಂದ ಮಾತ್ರ ಜಾತಿರಹಿತ ಸಮಾಜವನ್ನು ಸೃಷ್ಟಿ ಮಾಡಬಹುದು ಎಂದು ಸಾರಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಎಸ್ಪಿ ತಾಲೂಕು ಅಧ್ಯಕ್ಷ ಎಚ್.ಕುಮಾರ್ ಮಾತನಾಡಿ, ಕಾನ್ಷಿರಾಮ್ ಅವರು ಬಿಎಸ್ಪಿಯನ್ನು ಮೂರನೇ ಅತಿದೊಡ್ಡ ರಾಷ್ಟಿçÃಯ ಪಕ್ಷವಾಗಿಸಿದರು. ತಮಗೆ ಒಲಿದ ಹಲವಾರು ಹುದ್ದೆಗಳನ್ನು ಬದಿಗಿಸಿದ್ದರು. ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಬಹುದಾದ ಸದಾವಕಾಶವನ್ನು ತಳ್ಳಿಹಾಕಿ ಮಯಾವತಿ ಅವರನ್ನು ನಾಯಕಿಯನ್ನಾಗಿ ಸೃಷ್ಟಿಸಿದವರು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹೋದರತ್ವ ಸಮಿತಿಯ ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಆರ್.ವಸಂತ್, ಸಿದ್ದಯ್ಯ, ಖಜಾಂಚಿ ಟಿ.ಎಚ್.ರತ್ನ, ಆಸ್ಮ ಪರ್ವೀನ್, ಕಲಾವತಿ, ಲಕ್ಷö್ಮಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net